ದಾವಣಗೆರೆ: ನಗರದ ವಿದ್ಯಾನಗರದ ಲಾಸ್ಟ್ ಬಸ್ ನಿಲ್ದಾಣದ ಬಳಿಯ ಪಾಲಿಕೆಗೆ ಸೇರಿದ ಪಾರ್ಕ್ ಕಾಂಪೌಂಡ್ ಧ್ವಂಸಗೊಳಿಸಲಾಗಿದ್ದು, ಈ ಜಾಗವನ್ನು ಭೂಗಳ್ಳರುಯತ್ನಿಸುತ್ತಿದ್ದಾರೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಇದರ ಹಿಂದೆ ದೊಡ್ಡ ಕೈಗಳಿದ್ದು, ಪಾಲಿಕೆ ಆಯುಕ್ತರು ಹಾಗೂ ಮೇಯರ್ ಕೂಡಲೇ ಕಾಂಪಪೌಂಡ್ ಧ್ವಂಸಗೊಳಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಗಳು ಆಗ್ರಹಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಪಾರ್ಕ್ ನಲ್ಲಿ ಸುಮಾರು 2500 ಅಡಿ ಪಾರ್ಕ್ ಜಾಗ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣ ಮಾಡಿ ಹದ್ದುಬಸ್ತಿನಲ್ಲಿ ಇಡಲಾಗಿತ್ತು. ಆದ್ರೆ ಕೆಲ ಪ್ರಭಾವಿಗಳ ಬೆಂಬಲ ಪಡೆದು ಜೆಸಿಬಿ ಮೂಲಕ ಒಡೆದು ಹಾಕಲಾಗಿದೆ. ಸರ್ಕಾರಿ ಜಾಗವನ್ನು ಕಬಳಿಸಲು ಹೊರಟಿರುವ ಭೂಗಳ್ಳರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು. ಕಾಂಪೌಂಡ್ ಧ್ವಂಸ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ವಿಪಕ್ಷ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದ ಪಾಲಿಕೆಯ ಕಾಂಗ್ರೆಸ್ ಸದಸ್ಯರ ತಂಡ ಭೇಟಿ ನೀಡಿದೆ. ಈ ವೇಳೆ ಒಡೆದುಹಾಕಿರುವುದು ಗಮನಕ್ಕೆ ಬಂದಿದೆ.
ಈ ಕಾಂಪೌಂಡ್ ಧ್ವಂಸ ಮಾಡಿದವರನ್ನು ಪತ್ತೆ ಹಚ್ಚಬೇಕು. ಯಾವ ಕಾರಣಕ್ಕೆ ಒಡೆದು ಹಾಕಲಾಗಿದೆ ಎಂದು ಗೊತ್ತಾಗುತ್ತಿಲ್ಲ. ಈ ಜಾಗ ಪಾಲಿಕೆಗೆ ಸೇರಿದೆ ಎಂಬ ನಾಮಫಲಕ ಅಳವಡಿಸಿ, ಈ ಜಾಗ ಭೂಗಳ್ಳರ ಪಾಲಾಗದಂತೆ ಎಚ್ಚರ ವಹಿಸಬೇಕು. ಅತಿಕ್ರಮಣ ಮಾಡಲು ಹೊರಟಿರುವವರು ಎಂಥ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಈ ಜಾಗಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಬೇಕು. ಅತಿಕ್ರಮಣ ಮಾಡಲು ಮುಂದಾಗಿದ್ದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ. ಪಾಲಿಕೆಯ ಜಾಗ ಉಳಿಯಬೇಕು. ಈ ನಿಟ್ಟಿನಲ್ಲಿ ಆಯುಕ್ತರು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಆಯುಕ್ತರಿಗೆ ಮನವಿ ಸಲ್ಲಿಸುವ ವೇಳೆ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್ ಸಾಬ್, ವಿನಾಯಕ ಪೈಲ್ವಾನ್, ಉದಯ್ ಕುಮಾರ್, ಮಂಜುನಾಥ್ ಇಟ್ಟುಗುಂಡಿ ಹಾಜರಿದ್ದರು.



