ದಾವಣಗೆರೆ: ಮನೆ, ಅಂಗಡಿ ಮೇಲ್ಛಾವಣಿ ಕೊರೆದು ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಅಂಬಾದಾಸ್ ತುಳಿಸಿರಾಮ್ ಲಸ್ಕರ್ ಎಂಬ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಜಿಲ್ಲೆಯ 8 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ದಾವಣಗೆರೆಯ ವಿದ್ಯಾನಗರ ಠಾಣೆಯ 2 ಪ್ರಕರಣ, ಬಡಾವಣೆ ಠಾಣೆ, ಹರಿಹರ ನಗರ, ಗಾಂಧಿನಗರ, ನ್ಯಾಮತಿ, ಮಲೇಬೆನ್ನೂರು, ಚನ್ನಗಿರಿ ಠಾಣೆಯಲ್ಲಿ ತಲಾ ಒಂದು ಪ್ರಕರಣಕ್ಕೆ ಸಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 8 ಸಾವಿರ ನಗದು, 15 ಸಾವಿರ ಬೆಲೆಯ ಫೋನ್, 70 ಸಾವಿರದ ಲ್ಯಾಪ್ ಟಾಪ್ ಹಾಗೂ 30 ಸಾವಿರ ಬೆಲೆಯ ಎರಡು ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಕಳ್ಳತನ ಮಾಡಿದ ಹಣವನ್ನು ಖರ್ಚು ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ಶಂಕರ್ ಎಂಬುವರ ಸ್ಟೀಲ್ ಅಂಗಡಿ ಮೇಲ್ಛಾವಣಿ ಕೊರೆದು 3 ಸಾವಿರನಗದು ಹಾಗೂ ಸಿಸಿಟಿವಿ ಡಿವಿಆರ್ ಕಳ್ಳತನವಾಗಿದೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ತಂಡ ರಚಿಸಲಾಗಿತ್ತು.



