ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಪ್ರಸಿದ್ಧ ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ರಥೋತ್ಸವದಲ್ಲಿ ಆಕಸ್ಮಿಕವಾಗಿ ತೇರಿನ ಚಕ್ರಕ್ಕೆ ಸಿಲುಕಿ ದಾವಣಗೆರೆ ನಿವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ.
ತೇರು ಎಳೆಯುವಾಗ ಕಾಲು ಜಾರಿ ಚಕ್ರಕ್ಕೆ ಸಿಲುಕಿ ದಾವಣಗೆರೆಯ ಆರ್ ಟಿಒ ಆಫೀಸ್ ಸಮೀಪದ ಅಶೋಕ ನಗರ ನಿವಾಸಿ ಸುರೇಶ್ ಬಸವನಗೌಡ (42) ಸಾವನ್ನಪ್ಪಿದ್ದಾರೆ. ಇವರು ದಾವಣಗೆರೆಯ ಮಹೇಂದ್ರ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು ತಿಳಿದು ಬಂದಿದೆ. ಬಲಗೈ ಮೇಲೆ ತೇರು ಹರಿದು ಹೋಗಿದೆ.
ಶ್ರೀ ನಾರದಮುನಿ ಸ್ವಾಮಿ ರಥ ಏರಿ, ಸ್ವಲ್ಪ ದೂರು ಸಾಗುವಾಗಲೇ ಈ ಘಟನೆ ನಡೆಯಿತು. ತೇರು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಜನರು ಘಟನೆ ನೋಡಲು ಮುಗಿಬಿದ್ದರು. ತಕ್ಷಣ ಅಲ್ಲೇ ಇದ್ದ ಪೊಲೀಸರು ಜನರನ್ನು ನಿಯಂತ್ರಿಸಿ, ವೃದ್ಧನನ್ನು ಹೊರ ಸಾಗಿಸಿದರು. ವೃದ್ಧ ಸಾವನ್ನಪ್ಪಿದ ಹಿನ್ನೆಲೆ ತೇರನ್ನು ಅಲ್ಲಿಗೆ ನಿಲ್ಲಿಸಲಾಯಿತು.
ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ರಥೋತ್ಸವ ನಡೆಯದ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬೆಳಗ್ಗೆಯಿಂದ ಭಕ್ತರು ಶ್ರೀ ನಾರದಮುನಿ ದೇವರಿಗೆ ಆಯಾ ಬೆಡಗಿನವರು ಪ್ರಸಾದ ಎಡೆ ಮಾಡಿ ಭಕ್ತಿ ಸಮರ್ಪಿಸಿದರು. ನಾರದಮುನಿ ಸ್ವಾಮಿ ತೇರು ಏರುವವರೆಗೂ ಎಲ್ಲವೂ ಸಂಭ್ರಮದಿಂದ ನಡೆದಿತ್ತು. ಆದರೆ, ಕೊನೆಯಲ್ಲಿ ಈ ಘಟನೆ ಸಂಭವಿಸಿದ್ದರಿಂದ ತೇರನ್ನು ಅಲ್ಲಿಗೆ ನಿಲ್ಲಿಸಿದರು.



