ಜಗಳೂರು: ಜಿಲ್ಲೆಯ ಸದಾ ಬರಗಾಲದಿಂದ ತತ್ತರಿಸಿ ಹೋಗಿದ್ದ ಜಗಳೂರಿಗೆ ತುಂಗಭದ್ರೆ ಕಾಲಿಟ್ಟಿದ್ದಾಳೆ. ಮಂಗಳವಾರ ಮಧ್ಯಾಹ್ನ 1ಗಂಟೆ ತುಂಗಾ ಭದ್ರಾ ನದಿಯಿಂದ ಗೆ ಚಟ್ನಳ್ಳಿ ಗುಡ್ಡದಲ್ಲಿ ನಿರ್ಮಿಸಲಾಗಿರುವ ಡಿಲೆವರಿ ಛೇಂಬರ್ ನಿಂದ ನೀರು ಹರಿದಿದೆ . ಈ ಮೂಲಕ 57 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯ ಪರೀಕ್ಷಾರ್ಥ ನೀರು ಹರಿಯುವಿಕ ಆರಂಭವಾಗಿದ್ದು, ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸಂಕಲ್ಪ ಯಶಸ್ವಿಯಾಗಿದೆ.
ಚಟ್ನಳ್ಳಿ ಗುಡ್ಡದಿಂದ 8 ಕಿ.ಮೀ ದೂರದ ತುಪ್ಪದಹಳ್ಳಿಯ ಕೆರೆಗೆ ಅಳವಡಿಸಲಾಗಿರುವ ಪೈಪ್‌ಲೈನ್ ಮೂಲಕ ನೀರು ಬರುತ್ತಿರುವುದನ್ನೇ ಇಣುಕಿ ನೋಡುತ್ತಿದ್ದ ಜನರಿಗೆ ನೀರು ಕೆರೆಗೆ ಹರಿಯುತ್ತಿದ್ದಂತೆ ಜನರ ಮುಖದಲ್ಲಿ ಮಂದಹಾಸ ಮೂಡಿತ್ತು. ಸುಮಾರು ನಾಲ್ಕು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಬರದನಾಡಿಗೆ ನೀರು ಬಂದಿದೆ.
ಗಂಗಾವತರತದ ಶ್ರೀ ತರಳಬಾಳು ಜಗದ್ಗುರುಗಳಿಗೆ ಜಯವಾಗಲೆಂದು, ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೇರಿ ಎಲ್ಲಿರಗೂ ಚಪ್ಪಾಳೆ, ಕೇಕೆ, ಶಿಳ್ಳೆಗಳ ಜೊತೆ ಜೈಕಾರ ಮುಗಿಲುಮುಟ್ಟಿತ್ತು. 2018 ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಂದು ಕಡೆಯ ದಿನ ಜಗಳೂರು ಮತ್ತು ಭರಮಸಾಗರ ಏತನೀರಾವರಿ ಯೋಜನೆಯಡಿ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸಲು ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ತರಳಬಾಳು ಶ್ರೀ ಜಗದ್ಗುರುಗಳು ಗಮನ ಸೆಳೆಯುವ ಮೂಲಕ ಬಜೆಟ್ ನಲ್ಲಿ ಯೋಜನೆಗೆ 640 ಕೋಟಿ ಹಣ ಮೀಸಲಿರಿಸುವಂತೆ ಆಗ್ರಹಿಸಿದ್ದರು. ಪೂಜ್ಯರ ಒತ್ತಾಸೆಯಂತೆ ಸಿದ್ದರಾಮಯ್ಯನವರು ಭರಮಸಾಗರ ಮತ್ತು ಜಗಳೂರು ಎರಡು ಯೋಜನೆಗಳಿಗೆ ತಲಾ 250 ಕೋಟಿ ರೂ ಮೀಸಲಿಟ್ಟರು. ಆಗ ಶಾಸಕರಾಗಿದ್ದ ಎಚ್.ಪಿ.ರಾಜೇಶ್ ಮತ್ತು ಪ್ರಸ್ತುತ ಶಾಸಕರಾಗಿರುವ ಎಸ್.ವಿ.ರಾಮಚಂದ್ರ ಅವರು ತಮ್ಮ ತಮ್ಮ ಸರ್ಕಾರ ಅವಧಿಯಲ್ಲಿ ಏತ ನೀರಾವರಿಗೆ ಯೋಜನೆ ಜಾರಿಗೆ ಸಾಕಷ್ಟು ಬೆವರು ಹರಿಸಿದರು. ಅಷ್ಟೇ ಅಲ್ಲ ತರಳಬಾಳು ಶ್ರೀಗಳು ಸಹ ಯೋಜನೆಗಳನ್ನು ತಮ್ಮ ಎರಡು ಕಣ್ಣುಗಳಂತೆ ಜೋಪಾನವಾಗಿ ನೋಡಿಕೊಂಡು, ಬಂದಂತಹ ಎಲ್ಲಾ ಆಡಳಿತ,ತಾಂತ್ರಿಕ, ಭೌತಿಕ ಸಮಸ್ಯೆಗಳನ್ನು ತಮ್ಮ ವಿದ್ವತ್ಪೂರ್ಣ ಮಾರ್ಗದರ್ಶನದಿಂದ ಪರಿಹರಿಸಿದ ಫಲವೇ ಇಂದು ನೀರು ತುಪ್ಪದಹಳ್ಳಿ ಕೆರೆಗೆ ಹರಿದಿದೆ.
ತುಂಗಭದ್ರಾನದಿಯಿಂದ ಚಟ್ನಳ್ಳಿ ಗುಡ್ಡದ ಡಿಲೆವರಿ ಛೇಂಬರ್ ವರೆಗೆ ರೈಸಿಂಗ್ ಮೇನ್‌ನ ದೂರು 32 ಕಿ.ಮೀ. ಅಲ್ಲಿಂದ ಹರಪನಹಳ್ಳಿಯ 9 ಕೆರೆಗಳಿಗೆ ಮತ್ತು ಜಗಳೂರು ತಾಲೂಕಿನ 51 ಕೆರೆಗಳಿಗೆ ಪ್ರತ್ಯೇಕವಾಗಿ ಎರಡು ಬೃಹತ್ ಪೈಪ್ ಲೈನ್ ಮಾರ್ಗಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಜಗಳೂರಿನ ತುಪ್ಪದಹಳ್ಳಿ ಕೆರೆಗೆ ಮಾತ್ರ ಗುರುತ್ವಾಕಷರ್ಣಣೆ ಮೂಲಕ ಅಳವಡಿಸಲಾಗಿರುವ ಪೈಪ್‌ಲೈನ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಯುತ್ತಿದೆ. ಮಂಗಳವಾರ ದಿಟೂರಿನ ಜಾಕ್‌ವೆಲ್‌ನಲ್ಲಿ ಅಳವಡಿಸಲಾಗಿರುವ 9 ಬೃಹತ್ ಮೋಟರ್‌ಗಳಲ್ಲಿ 2 ಮೋಟರ್‌ಗಳನ್ನು ಮಾತ್ರ ಪ್ರಾಯೋಗಿಕವಾಗಿ ಕರ‍್ಯ ನಿರ್ವಹಿಸುತ್ತಿವೆ. ಇನ್ನೊಂದು ಮೋಟರ್ ಅನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಒಂದು ಮೋಟರ್‌ನ ಸಾಮರ್ಥ್ಯ 2050 ಹೆಚ್.ಪಿ. ಒಂದು ಮೋಟರ್ ಸೆಕೆಂಡ್‌ಗೆ 15 ಕ್ಯೂಸೆಕ್ ನೀರನ್ನು ಎತ್ತಲಿದೆ. ಪ್ರಸ್ತುತ ಎರಡು ಮೋಟರ್‌ಗಳಿಂದ ಪ್ರತಿಸೆಕೆಂಡ್‌ಗೆ 30 ಕ್ಯೂಸೆಕ್ ನೀರು ತುಪ್ಪದಹಳ್ಳಿ ಕೆರೆಗೆ ಹರಿಯುತ್ತಿದೆ. ಬರುವ ಮಳೆಗಾಲಕ್ಕೆ 57 ಕೆರೆಗಳಿಗೂ ನೀರು ಹರಿಯಲಿದೆ. ಅಲ್ಲಲ್ಲಿ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದ್ದು ಈ ಬೇಸಿಗೆಯಲ್ಲಿ ಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದಿರುವ ಉಡುಪಿ ಮೂಲಕ ಜಿ.ಶಂಕರ್ ಕಂಪನಿಯ ಅಧಿಕಾರಿಗಳು, ಕಾರ್ಮಿಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ರೈತರ ಪಾಲಿನ ಬೆಳದಿಂಗಳಾಗಿರುವ ತರಳಬಾಳು ಶ್ರೀಜಗದ್ಗುರುಗಳವರಿಗೆ ಅನ್ನದಾತರು ಧನ್ಯತೆಯ ನಮನ ಸಲ್ಲಿಸುತ್ತಿದ್ದಾರೆ.
ಬರದ ನಾಡಾದ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಬಂದ ವಿಡಿಯೋ ತುಣುಕುಗಳನ್ನು ಮೊಬೈಲ್‌ನಲ್ಲಿ ನೋಡಿ ನಮಗೆ ಅತೀವ ಸಂತೋಷವಾಯಿತು. ಕವಿ ದ.ರಾ.ಬೇಂದ್ರೆ ಅವರ ಕವಿತೆಯ ಸಾಲಿನಂತೆ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸಿಳಿ ಬಾ .. ಎಂಬ ಸಾಲಿನಂತೆ ನೀರು ಚಿಮ್ಮುತ್ತಿರುವುದನ್ನು ನೋಡುತ್ತಿದ್ದರೆ ಅದೆಂತಹ ಆನಂದ. ಜಗಳೂರು ಭಾಗದ ಜನರ ಕಷ್ಟಗಳು ಕರಗಿ ಅವರ ಬಾಳು ಬಂಗಾರವಾಗಲಿ. ಜನರು ಆರ್ಥಿಕವಾಗಿ ಸದೃಢರಾಗಲಿ. ಯೋಜನೆ ಸಂಪೂರ್ಣ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ಧಾರೆ.
ಜಗಳೂರು ತಾಲೂಕಿನ ಏತ ನೀರಾವರಿ ಯೋಜನೆಗೆ ಬಹುದಿನಗಳ ಕನಸು ನನಸಾಗಿದೆ. ತರಳಬಾಳು ಶ್ರೀಜಗದ್ಗುರುಗಳವರ ದಿವ್ಯ ನೇತೃತ್ವಕ್ಕೆ ಫಲ ಸಿಕ್ಕಿದೆ. ಇದೇ ತಿಂಗಳು 29 ರಂದು ಮುಖ್ಯಮಂತ್ರಿಗಳು ಜಗಳೂರಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಬರುತ್ತಿದ್ದು. ಅಪ್ಪರ್ ಭದ್ರ ಯೋಜನೆಗೂ ಚಾಲನೆ ನೀಡುವರು. ಜಗಳೂರು ಬರಪೀಡಿತ ಎಂಬ ಕಳಂಕ ಕಳಚಲಿದೆ. ರೈತರ ಸಹಕಾರದಿಂದ ಈ ಯೋಜನೆ ಯಶಸ್ವಿಗೆ ಕಾರಣವಾಯಿತು. ಈ ಯೋಜನೆಗೆ ಶ್ರಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೃದಯಪೂರ್ವಕ ಅಭಿನಂದನೆ ಗಳನ್ನು ಜಗಳೂರಿನ ಶಾಸಕರ ಎಸ್.ವಿ.ರಾಮಚಂದ್ರ ಹೇಳಿದ್ದಾರೆ.