ಡಿವಿಜಿ ಸುದ್ದಿ, ದಾವಣಗೆರೆ: ನಾವು ವಾಸಿಸುವ ಪ್ರದೇಶದಲ್ಲಿ ಗಾಳಿ, ಬೆಳಕು ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಸ್.ರಾಘವೇಂದ್ರಸ್ವಾಮಿ ಹೇಳಿದರು.
ಹೆಚ್.ಕೆ.ಆರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.
ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣಗಳ ಕುರಿತು ಪರಿಶೀಲಿಸುವರು. ಪ್ರತಿಯೊಬ್ಬರು ಸಿಬ್ಬಂದಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು. ಮನೆಗಳಿಗೆ ಬಂದಾಗ ಕ್ಷಯರೋಗದ ಲಕ್ಷಣವಿದ್ದರೆ ಕಫ ಪರೀಕ್ಷೆ ಮಾಡಲಾಗುತ್ತದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕೆ.ಹೆಚ್.ಗಂಗಾಧರ್ ಮಾತನಾಡಿ, ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಬಿಟ್ಟು-ಬಿಟ್ಟು ಜ್ವರ ಬರುವುದು, ಬೆವರು ಸಹ ಕಾಣಿಸಿಕೊಳ್ಳುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವಿಕೆ, ಕಫದಲ್ಲಿ ಕೆಲವೊಮ್ಮೆ ರಕ್ತ ಸಹ ಬೀಳಬಹುದು ಎಂದು ವಿವರಿಸಿದರು.
ಕ್ಷಯ ರೋಗ ಪತ್ತೆ ಕಾರ್ಯಕ್ರಮವು ನ.25 ರಿಂದ ಡಿ.12 ರವರೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದ್ದು, ಕಫ ಪರೀಕ್ಷೆಯನ್ನು ಮಾಡಿದಾಗ ರೋಗವು ಇಲ್ಲವೆಂದು ಖಚಿತವಾದರೆ ಅಂತಹವರನ್ನು ಎಕ್ಸರೆಗೆ ರೆಫರ್ ಮಾಡಲಾಗುತ್ತದೆ. ಹಾಗೂ ಪ್ರತಿಯೊಂದು ಕಫ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವವರಿಗೆ ಸಿಬಿಎನ್‍ಎಎಟಿ ಪರೀಕ್ಷೆ ಮಾಡಿಸಿದ ನಂತರ 6 ತಿಂಗಳ ಟಿಬಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಒಂದೊಮ್ಮೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಏನಾದರೂ ತೊಂದರೆಗೊಳಗಾದರೆ ಕೊಡಲೇ ವೈದ್ಯರನ್ನು ಭೇಟಿ ಮಾಡಿ ಸಲಹೆ-ಸೂಚನೆಗಳನ್ನು ಪಾಲಿಸಬೇಕು ಹಾಗೂ ನಿಕ್ಷಯ್ ಪೋಷಣೆ ಯೋಜನೆಯಡಿ ಪ್ರತಿಯೊಂದು ಟಿಬಿ ರೋಗಿಗೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ನೇರವಾಗಿ ರೂ.500 ಪಾವತಿಸಲಾಗುವುದು ಎಂದ ಅವರು ವೈದ್ಯರ ಸಲಹೆ ಮೇರೆಗೆ ನಿರಂತರ ಹಾಗೂ ಬಹು ವಿಧ ಔಷಧ ಚಿಕಿತ್ಸಾ ಕ್ರಮದಿಂದ ಕ್ಷಯರೋಗವನ್ನು ಸಂಪೂರ್ಣ ಗುಣಪಡಿಸಬಹುದು ಮತ್ತು ಕ್ಷಯರೋಗದ ಬಗ್ಗೆ ಕಳಂಕ ಬೇಡ, ಈ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರುವುದು ಅತ್ಯವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷಯರೋಗಿಗಳಿಗೆ ಪ್ರೋಟಿನ್ ಪೌಡರ್ ಹಾಗೂ ಮಲ್ಟಿವಿಟಮಿನ್ ಸಿರಪ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಮತ್ತು ದಾವಣಗೆರೆ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್ ನಾಯ್ಕ ಹಾಗೂ ಹೆಚ್.ಕೆ.ಆರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ಸಿಬ್ಬಂದಿ ವರ್ಗದವರು, ಮಹಾನಗರಪಾಲಿಕೆ ಸದಸ್ಯೆ ಯಶೋಧಮ್ಮ ಉಮೇಶ್ ಉಪಸ್ಥಿತಿರಿದ್ದರು.