ಡಿವಿಜಿ ಸುದ್ದಿ, ಹೊಸಪೇಟೆ: ಅನರ್ಹ ಶಾಸಕ , ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ತಮ್ಮ ಮಗನ ಮದುವೆಗೆ ಬರುವ ಜನರಿಗೆ 8 ಗ್ರಾಂ ಚಿನ್ನದ ನಾಣ್ಯ ಹಂಚುತ್ತಿದ್ದಾರೆ. ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ವಿಜಯನಗರ ಕ್ಷೇತ್ರದ ಉಸ್ತುವಾರಿ ಬಸವರಾಜ ರಾಯರೆಡ್ಡಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಒಟ್ಟು 2.36 ಲಕ್ಷ ಮತದಾರಿದ್ದು, 55 ಸಾವಿರ ಕುಟುಂಬಗಳಿಗಳಿವೆ. ಮನೆಗೊಂದರಂತೆ ಲಕ್ಷ್ಮಿ ಚಿತ್ರವಿರುವ ಚಿನ್ನದ ನಾಣ್ಯ ನೀಡುತ್ತಿದ್ದಾರೆ. ಇದು ಚುನಾವಣಾ ಅಕ್ರಮವಾಗಿದ್ದು, ಇನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆನಂದ್ ಸಿಂಗ್ ತಮ್ಮ ಮಗನ ಮದುವೆಗೆ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಶಾಮಿಯಾನ ಹಾಕಿಸಿದ್ದಾರೆ. ಅಷ್ಟೇ ವೆಚ್ಚದಲ್ಲಿ ಊಟೋಪಚಾರಕ್ಕೂ ವ್ಯವಸ್ಥೆ ಮಾಡಿದ್ದಾರೆ. ಇದಲ್ಲದೆ ಉಡುಗೊರೆ ರೂಪದಲ್ಲಿ ಚಿನ್ನದ ನಾಣ್ಯ ಕೊಡುತ್ತಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಂಗ್ ತಮ್ಮ ಮಗನ ಮದುವೆ ಮಾಡುವುದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ, ಈ ಮದುವೆಯ ಖರ್ಚು ವೆಚ್ಚವು ಕೂಡ ಚುನಾವಣಾ ನೀತಿ ಸಂಹಿತೆಗೆ ಒಳಪಡಬೇಕು. ಜನರಿಗೆ ಊಟೋಪಚಾರ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಅಭ್ಯರ್ಥಿಯ ಖರ್ಚಿನಲ್ಲಿ ಸೇರಿಸಬೇಕು. ಮದುವೆಯ ಪ್ರತಿಯೊಂದು ಚಟುವಟಿಕೆಗಳ ಮೇಲೆ ಚುನಾವಣೆ ಆಯೋಗ ನಿಗಾ ಇಟ್ಟಿರಬೇಕು ಎಂದು ತಿಳಿಸಿದರು. ಡಿ. 1ರಂದು ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಮದುವೆ ನಿಗದಿಯಾಗಿದೆ.