ಹಾವೇರಿ: ಜಿಲ್ಲೆಯಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದ್ದು, 200 ಕ್ವಿಂಟಲ್ ಮೆಕ್ಕೆಜೋಳ ರಾಶಿ, ಒಂದು ಶೇಂಗಾ ಒಡೆಯುವ ಯಂತ್ರ, 5 ಸಾವಿರ ಅಡಿಕೆ ಸಸಿಗಳು, ಮೆಣಸಿನ ಸಸಿಗಳ ಅಗಿಮಡಿ ಹಾಗೂ 40ಕ್ಕೂ ಹೆಚ್ಚು ಹೊಟ್ಟು, ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ.
ಹಾವೇರಿ ತಾಲ್ಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ವಿದ್ಯುತ್ ಕಂಬದಲ್ಲಿ ಕಿಡಿ ಹೊತ್ತಿದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬಣವೆಗೆ ಬೆಂಕಿ ತಗುಲಿ ಇಡೀ ಪ್ರದೇಶ ಆವರಿಸಿಕೊಂಡಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ.
ಬೆಂಕಿ ಅವಘಡ ನಡೆದ ಸ್ಥಳದಲ್ಲಿ ಗ್ರಾಮದ 25ಕ್ಕೂ ಹೆಚ್ಚು ರೈತರ ಕಣಗಳಿದ್ದು, ಒಂದು ಬಣವೆಯಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ 40ಕ್ಕೂ ಹೆಚ್ಚು ಬಣವೆಗಳು ಸಂಪೂರ್ಣ ಸುಟ್ಟು ಹೋಗಿವೆ. ಈ ಅವಘಡದಲ್ಲಿ 4 ಚಕ್ಕಡಿ, 200 ಕ್ವಿಂಟಲ್‌ನ ಮೆಕ್ಕೆಜೋಳ ದ ಮೂರು ತೆನೆರಾಶಿ, ಒಂದು ಶೇಂಗಾ ಒಡೆಯುವ ಯಂತ್ರ, 5 ಸಾವಿರ ಅಡಿಕೆ ಸಸಿಗಳು, ಮೆಣಸಿನ ಸಸಿಗಳ ಅಗಿಮಡಿ ಮತ್ತು 40ಕ್ಕೂ ಹೆಚ್ಚು ಹೊಟ್ಟು ಹಾಗೂ ಮೇವಿನ ಬಣವೆಗಳು ಸುಟ್ಟು ಹೋಗಿವೆ.
ಬಿರುಬಿಸಿಲಿನಲ್ಲಿ ಬೆಂಕಿ ತಗುಲಿದ ಪರಿಣಾಮ ಬೆಂಕಿ ನಂದಿಸಲು ಗ್ರಾಮಸ್ಥರು ಪರದಾಡಿದರು. 4 ಗಂಟೆಗಳ ಸತತ ಕಾರ್ಯಾಚರಣೆಯಿಂದ 2 ಅಗ್ನಿಶಾಮಕ ವಾಹನ ಸೇರಿದಂತೆ 9 ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ್ದಾರೆ.10 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.



