ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಮಾ. 04) ತಮ್ಮ ಮೊದಲ ಬಜೆಟ್ ಮಂಡಿಸಿದರು. ಈ ಬಾರಿ ಸಿಎಂ ತಮ್ಮ ತವರು ಜಿಲ್ಲೆ ಹಾವೇರಿಗೆ ಭರ್ಜರಿ ಅನುದಾನ ನೀಡಿದ್ದಾರೆ. ಆದರೆ, ಪಕ್ಕದ ದಾವಣಗೆರೆ ಜಿಲ್ಲೆಗೆ ಎಂದಿನಂತೆ ಮೂಗಿಗೆ ತುಪ್ಪ ಸವರಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಹೇಳಿಕೊಳ್ಳುವ ಯಾವುದೇ ದೊಡ್ಡ ಅನುದಾನ ಸಿಕ್ಕಿಲ್ಲ.
ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ವನ್ನು ಬಿಟ್ಟರೆ, ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆಯ ಕನಸು ಈಡೇರಲಿಲ್ಲ. ಜೊತೆಗೆ ಅಡಿಕೆ ಬೆಳೆಯ ಬೆಲೆಯನ್ನು ಸ್ಥಿರವಾಗಿರಿಸಲು ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಉಪ ಉತ್ಪನ್ನಗಳು ಮತ್ತು ಸಂಸ್ಕರಣಾ ಘಟಕದ ಸ್ಥಾಪನೆಯ ಬೇಡಿಕೆ ಈಡೇರಿಲ್ಲ.
ದಾವಣಗೆರೆ ಜಿಲ್ಲೆಗೆ ಸಿಕ್ಕ ಹೊಸ ಯೋಜನೆಗಳೇನು: ದಾವಣಗೆರೆ ಜಿಲ್ಲೆಗೆ ಈ ಬಾರಿಯೂ ಮೂಗಿಗೆ ತುಪ್ಪ ಸವರಿದ್ದಾರೆ. ದಾವಣಗೆರೆ, ಕೊಪ್ಪಳದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ಸ್ಥಾಪಿಸುವ ಕಾರ್ಯ ಸಾಧ್ಯತೆ ಬಗ್ಗೆ ವರದಿಯನ್ನು ತಯಾರಿಸುವುದು ಘೋಷಣೆ ಮಾಡಿದೆ. ಇನ್ನು ಕೇಂದ್ರ, ರಾಜ್ಯ ಸರ್ಕಾರ 50:50 ಮಾದರಿಯಲ್ಲಿ ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ ನೂತನ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇದಲ್ಲದೆ ರಸ್ತೆ ಸುರಕ್ಷತಾ ನಿಧಿಯಡಿ ದಾವಣಗೆರೆ, ದೇವನಹಳ್ಳಿ, ಕೋಲಾರ, ಬಳ್ಳಾರಿ , ಹೊಸಪೇಟೆ, ಗದಗ, ಬೀದರ್, ವಿಜಪುರದಲ್ಲಿ 80 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.