ದಾವಣಗೆರೆ: ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದಿಂದ ಜಯದೇವ ವೃತ್ತದಲ್ಲಿ ಪತ್ರಿಭಟನೆ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್ ಮಾತನಾಡಿ, ಸದನಕ್ಕೆ ರಾಷ್ಟ್ರ ಧ್ವಜವನ್ನು ತಂದು, ಧ್ವಜ ನೀತಿಯನ್ನು ಕಾಂಗ್ರೆಸ್ ಉಲ್ಲಂಘಿಸಿದೆ. ಕಾಂಗ್ರೆಸ್ ನಾಯಕರ ದುರ್ವರ್ತನೆಗೆ ಸಾಕ್ಷಿ. ವಿಧಾನಸಭೆ ಸದನದಲ್ಲಿ ವಿಷಯ ಇಲ್ಲದಿದ್ದರೂ ಗದ್ದಲವೆಬ್ಬಿಸಿ ಕಲಾಪ ವ್ಯರ್ಥ ಮಾಡಿದೆ. ಇದರಿಂದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಈ ನೆಡೆ ರಾಜ್ಯದ ಅಭಿವೃದ್ಧಿ, ಬಜೆಟ್ ಪೂರ್ವಭಾವಿ ಚರ್ಚೆ, ಕೋವಿಡೋತ್ತರ ಬೆಳವಣಿಗೆ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಮುಖಂಡ ಹರ್ಷ ಅವರ ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸುವ ಮೂಲಕ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರವು ಜನರಲ್ಲಿ ವಿಶ್ವಾಸ ಮೂಡಿಸಿದೆ. ಅದಲ್ಲದೆ ಸದನದಲ್ಲಿ ಸಚಿವ ಈಶ್ವರಪ್ಪ ಅವರ ಮೇಲೆ ಹಲ್ಲೆಗೆ ಮುಂದಾದ ಡಿ.ಕೆ.ಶಿವಕುಮಾರ್ ತಮ್ಮ ನೈಜ ಗೂಂಡಾ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ , ಉಪಾಧ್ಯಕ್ಷ ಮಂಜನಾಯ್ಕ್, ಶಿವರಾಜ್ ಪಾಟೀಲ್, ಶ್ರೀನಿವಾಸ ದಾಸಕರಿಯಪ್ಪ, ಅಜಯ್ ಕುಮಾರ್, ಎಸ್. ಟಿ ವೀರೇಶ್, ಶಿವಪ್ರಕಾಶ್, ಬಾತಿ ವೀರೇಶ್, ವಿಶ್ವಾಸ್ ಹೆಚ್.ಪಿ ಸೇರಿದಂತೆ ಅನೇಕರಿದ್ದರು.