ಬೆಂಗಳೂರು: ಬೆಂಗಳೂರಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಜನವರಿ 31ರವರೆಗೆ ರಜೆ ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜ. 19ರ ವರೆಗೆ ಬೆಂಗಳೂರಿನಲ್ಲಿನ 1 ರಿಂದ 9ನೇ ತರಗತಿಯವರೆಗಿನ ಶಾಲೆಗಳಿಗೆ ರಜೆ ಘೋಷಿಸಿತ್ತು. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಜೆ ವಿಸ್ತರಿಸಲಾಗಿದೆ.
ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ 10 ರಿಂದ 12 ತರಗತಿಗಳು ನಡೆಯುತ್ತಿದ್ದು, ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ತೀವ್ರತೆ ನೋಡಿಕೊಂಡು ಮುಂದಿನ ದಿನಗಳಲ್ಲಿ 10 ರಿಂದ 12ನೇ ತರಗತಿಯವರೆಗಿನ ತರಗತಿಗಳನ್ನು ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರು ನಗರ ಹೊರತು ಪಡಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಆದರೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇತರೆ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಿದರೆ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.



