ದಾವಣಗೆರೆ: ದಾವಣಗೆರೆ ತಾಲ್ಲೂಕಿನಲ್ಲಿ ಸರ್ಕಾರದ ಸೂಚನೆಯಂತೆ 15 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕೋವಿಡ್-19 ನಿರೋಧಕ ಲಸಿಕೆಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಜ. 01 ರಿಂದ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ತಾಲ್ಲೂಕಿಗೆ ಒಟ್ಟು 16640 ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
15 ರಿಂದ 18 ವರ್ಷದೊಳಗಿನ ಅಥವಾ 2007 ಮತ್ತು ಅದಕ್ಕೂ ಮುನ್ನ ಹುಟ್ಟಿದ ಎಲ್ಲ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಶಾಲೆ, ಕಾಲೇಜುಗಳಲ್ಲಿ ಅಥವಾ ಸಮೀಪದ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣ ಮಾಡಲಾಗುವುದು. ಆಯಾ ಶಾಲಾ, ಕಾಲೇಜು ಹಂತದಲ್ಲಿ ಮಕ್ಕಳು, ಪಾಲಕರು, ಪೋಷಕರಿಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಲಸಿಕೆ ಪಡೆಯುವ ಮಕ್ಕಳ ತಂದೆ, ತಾಯಿಯರ, ಪೋಷಕರ, ಶಾಲಾ ಶಿಕ್ಷಕರ ಅಥವಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಯನ್ನು ಬಳಸಿ ಲಸಿಕಾಕರಣ ನಡೆಸುವಂತೆ ಸೂಚನೆ ನೀಡಲಾಗಿದೆ. ದಾವಣಗೆರೆ ತಾಲ್ಲೂಕಿನ ನಗರ ಪ್ರದೇಶಕ್ಕೆ ಒಟ್ಟು 8240 ಡೋಸ್ ಹಾಗೂ ಗ್ರಾಮೀಣ ಪ್ರದೇಶಕ್ಕೆ 8400 ಡೋಸ್ ಸೇರಿದಂತೆ ಒಟ್ಟು 16640 ಡೋಸ್ ಲಸಿಕೆ ವಿತರಿಸಲಾಗಿದ್ದು, ಜ. 01 ರಿಂದಲೇ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.