ದಾವಣಗೆರೆ: ಪ್ರಸಕ್ತ ಸಾಲಿಗೆ ಉಪನೋಂದಣಿ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಹರಿಹರ ನಗರ ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಹಾಗೂ ಕೃಷಿಯೇತರ ಆಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸಲು ಡಿ.27 ರಂದು ತಹಶೀಲ್ದಾರ್ ಹಾಗೂ ತಾಲ್ಲೂಕು ಮೌಲ್ಯ ಮಾಪನ ಉಪಸಮಿತಿ ಹರಿಹರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರ ಕೈಗೊಳ್ಳಲಾಗಿದೆ.
ಪ್ರಸ್ತುತ ಚಾಲ್ತಿರುವ ದರಕ್ಕೆ ಅಲ್ಪ ಬೆಲೆಯಲ್ಲಿ ಪರಿಷ್ಕರಿಸಲು ಸಭೆಯಲ್ಲಿ ಅನುಮೋದನೆ ದೊರೆತಿರುತ್ತದೆ. ಪರಿಷ್ಕೃತ ಮಾರ್ಗಸೂಚಿ ಬೆಲೆಪಟ್ಟಿಯನ್ನು ತಯಾರಿಸಿದ್ದು, ಸಾರ್ವಜನಿಕರು ಸಕಾರಣಗಳೊಂದಿಗೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ತಹಶೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳು ಹರಿಹರ ಇವರಿಗೆ ಸಲ್ಲಿಸಬಹುದು. ತಮ್ಮ ಅಹವಾಲುಗಳನ್ನು ತಾಲ್ಲೂಕು ಮೌಲ್ಯಮಾಪನ ಉಪಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಸಮಂಜಸವೆನಿಸಿದಲ್ಲಿ ತಮ್ಮ ಅಹವಾಲನ್ನು ಪರಿಗಣನೆಗೆ ತೆಗೆದುಕೊಂಡು ಕ್ರಮಕೈಗೊಳ್ಳಲಾಗುವುದು. ಹಾಗೂ ಸಮಿತಿಯ ಸರ್ವ ಸದಸ್ಯರು ತೀರ್ಮಾನಿಸಿದಲ್ಲಿ ತಮ್ಮ ಅಹವಾಲನ್ನು ಕೇಂದ್ರೀಯ ಮೌಲ್ಯಮಾಪನ ಸಮಿತಿಗೆ ಕಳುಹಿಸಲಾಗುವುದೆಂದು ಕೇಂದ್ರೀಯ ಮೌಲ್ಯಮಾಪನ ಉಪಸಮಿತಿಯ ಉಪನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.