ಡಿವಿಜಿ ಸುದ್ದಿ, ಬೆಂಗಳೂರು: ಬುಧವಾರ ದಾವಣಗೆರೆಯ ಕೊಡಗನೂರು ಬಳಿ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಪತ್ರಕರ್ತ ಎಂ.ಸಿ. ಮಂಜುನಾಥ್ (30) ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಜುನಾಥ್ ನಿಧನದಿಂದ ಒಬ್ಬ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಎಂ.ಸಿ.ಮಂಜುನಾಥ ಅವರ ಶವವನ್ನು ಟಾಟಾ ಏಸ್ ವಾಹನದಲ್ಲಿ, ಪ್ರಾಣಿಗಳಿಗಿಂತ ನಿಕೃಷ್ಟವಾಗಿ ಸಾಗಿಸಿರುವುದು ಖಂಡಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ.