ದಾವಣಗೆರೆ: ಜಿಲ್ಲಾ ಪ್ಯಾರ ಬ್ಯಾಡ್ಮಿಂಟನ್ ಸಂಸ್ಥೆಯ 7 ಜನ ಕ್ರೀಡಾಪಟುಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡಿ.24ರಿಂದ 26ರ ವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯುವ 4ನೇ ರಾಷ್ಟ್ರೀಯ ಪ್ಯಾರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಂ.ಶಿವಕುಮಾರ್, ಪ್ಯಾರ ಬ್ಯಾಡಿಂಟನ್ ಕರ್ನಾಟಕ ತಂಡಕ್ಕೆ ಬೆಂಗಳೂರಿನಲ್ಲಿ ನಡೆದ ನಡೆದ ಆಯ್ಕೆ ಪ್ರಕ್ರಿಯಲ್ಲಿ ನಮ್ಮ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, 11 ಪದಕಗಳನ್ನು ಮುಡಿಗೇರಿಸಿಕೊಂಡು 7 ಮಂದಿ ಕ್ರೀಡಾಪಟುಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದ 15 ಮಂದಿಯಲ್ಲಿ ನಮ್ಮ ಜಿಲ್ಲೆಯವರೇ 7 ಜನ ಆಟಗಾರರು ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಭುವನೇಶ್ವರದಲ್ಲಿ 6 ಕೆಟಗರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಮ್ಮ ಸಂಸ್ಥೆಯ ಸುಧಾ ಎ, ಶಿಲ್ಪ ಕೆ, ರುದ್ರಪ್ರಸನ್ನ ಎಂ, ಇಂದುಧರ ಬಿ.ಎಸ್, ಅಬ್ದುಲ್ ಗಫಾರ್ ಎ, ಪಾಂಡುರಂಗಸ್ವಾಮಿ ಬಿ.ಆರ್, ಹನುಮಂತ ಡಿ.ಎನ್ ಅವರುಗಳು ಡಬ್ಲ್ಯೂ ಎಚ್ 1 ಮತ್ತು ಡಬ್ಲ್ಯೂ ಎಚ್ 2ರ ಕೆಟಗರಿಯಲ್ಲಿ ಆಯ್ಕೆಯಾಗಿದ್ದಾರೆ. ಇವರಿಗೆಲ್ಲಾ ಮೈಸೂರಿನಲ್ಲಿ ತರಬೇತಿ ನೀಡಲಾಗಿದ್ದು, ಇವರೆಲ್ಲರೂ ಇಂದು ( ಡಿ. 21) ರಾತ್ರಿ ಭುವನೇಶ್ವರಕ್ಕೆ ರೈಲಿನಲ್ಲಿ ಪಯಣ ಬೆಳೆಸಲಿದ್ದಾರೆ ಎಂದರು.
ಕ್ರೀಡಾಪಟು ಇಂದುಧರ ಬಿ.ಎಸ್. ಮಾತನಾಡಿ, ಜಿಲ್ಲೆಯಲ್ಲಿ ಪ್ಯಾರ ಬ್ಯಾಡ್ಮಿಂಟನ್ ಕ್ರೀಡೆ ತರಬೇತುದಾರರ ಕೊರತೆ ಇದ್ದು, ಯುವಜನ ಮತ್ತು ಕ್ರೀಡಾ ಇಲಾಖೆ ತರಬೇತುದಾರರನ್ನು ನೇಮಿಸುವುದರ ಜೊತೆಗೆ ಪ್ಯಾರ ಬ್ಯಾಡ್ಮಿಂಟನ್ ಆಟ ಆಡಲು ಇರುವ ವಿಶೇಷ ವ್ಹೀಲ್‌ಚೇರ್‌ಗಳನ್ನು ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆ.ಬಿ.ಉಮೇಶ್, ಉಪಾಧ್ಯಕ್ಷರಾದ ಈ.ದೇವೇಂದ್ರಪ್ಪ, ಬಿ.ಎಂ.ಕರಿಬಸಪ್ಪ, ನಿರ್ದೇಶಕರುಗಳಾದ ಎನ್.ಎಚ್.ಬಸವರಾಜ್, ಕಲ್ಪೇಶ್ ಮತ್ತು ಕರ್ನಾಟಕ ತಂಡಕ್ಕೆ ಆಯ್ಕೆಯಾದ ಎಲ್ಲಾ ಏಳು ಜನ ಆಟಗಾರರು ಹಾಜರಿದ್ದರು.



