ಡಿವಿಜಿ ಸುದ್ದಿ, ದಾವಣಗೆರೆ: ಕುರುಬ ಸಮುದಾಯದ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹಾಲುಮತ ಮಹಾಸಭಾ ವತಿಯಿಂದ ಪ್ರತಿಭಟಿಸಿ ಉಪವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿಯವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಾಳ್ಮೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ ಉದ್ಧಟತನ ಮೆರೆದು ಬೇಜಾವಾಬ್ದಾರಿ ತೋರಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರ್ ನಲ್ಲಿ ಶ್ರೀ ಕನಕದಾಸ ಸರ್ಕಲ್ ಬಗ್ಗೆ ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಸಮಾಜದ ಶ್ರೀಗಳು, ಸಮಾಜದ ಹಿರಿಯರು, ಯುವಕರ ಸಮ್ಮುಖದಲ್ಲಿ ನಡೆಯುತ್ತಿದ್ದ ಶಾಂತಿ ಸಭೆಯಲ್ಲಿ ಶ್ರೀಗಳಿಗೆ ಏಕ ವಚನದಲ್ಲಿ ಮಾತನಾಡಿ ಅಗೌರವ ತೋರಿದ್ದಾರೆ ಎಂದರು.
ಸಚಿವರಾಗುವಾಗ ಎಲ್ಲಾ ಸಮಾಜದವರನ್ನು, ಸಮಾನ ಗೌರವದಿಂದ ಕಾಣುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಆದರೆ ಜಾತಿ ಜಾತಿಗಳ ಮಧ್ಯೆ ದ್ವೇಷ ಉಂಟು ಮಾಡುತ್ತಿದ್ದಾರೆ. ಈ ಹಿನ್ನಲೆ ರಾಜ್ಯಪಾಲರು ಸಚಿವ ಸ್ಥಾನದಿಂದ ಮಾಧುಸ್ವಾಮಿಯವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.



