ದಾವಣಗೆರೆ: ಚಿತ್ರದುರ್ಗ- ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಥಳೀಯ ಗಂಡಸು ಅಭ್ಯರ್ಥಿ ಯಾರು ಸಿಗಲಿಲ್ಲವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಕಿಡಿಕಾರಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಪರ ಪ್ರಚಾರ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ಥಳೀಯ ಅಭ್ಯರ್ಥಿಗಳನ್ನು ಕಡೆಗಣಿಸಿ ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತಂದು ನಿಲ್ಲಿಸಿದೆ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆ ಅಥವಾ ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಥಳೀಯರನ್ನು ಚುನಾವಣೆಗೆ ನಿಲ್ಲುವ ಶಕ್ತಿ ಕಾಂಗ್ರೆಸ್ ಗೆ ಇಲ್ಲ. ಹೀಗಾಗಿಬೆಂಗಳೂರಿನಿಂದ ಉದ್ಯಮಿಯನ್ನು ಅಭ್ಯರ್ಥಿಯಾಗಿ ಕರೆ ತಂದಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸದಸ್ಯರು ಸ್ವಾಭಿಮಾನ ಕಳೆದುಕೊಳ್ಳದೇ ತಕ್ಕ ಪಾಠ ಕಲಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಿಗೆ ಬರುತ್ತಿದ್ದ 250 ಗೌರವಧನವನ್ನು ನಮ್ಮ ಸರ್ಕಾರ 1,000 ರೂಪಾಯಿಗೆ ಹೆಚ್ಚಿಸಿದೆ. ಇದನ್ನು 3,000ಕ್ಕೆ ಹೆಚ್ಚಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಾನು ಕೂಡ ಮನವಿ ಮಾಡುತ್ತೇನೆ ಎಂದರು.



