ದಾವಣಗೆರೆ: ಮಹಿಳೆಗೆ ಚಾಕುವನ್ನುತೋರಿಸಿ, ಹಲ್ಲೆ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿದ್ದ ಏಳು ಅಂತರ್ ಜಿಲ್ಲಾ ಆರೋಪಿತರನ್ನು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಪೊಲೀಸರು ಬಂಧಿಸಿದ್ಧಾರೆ. ಅದರಲ್ಲೂ ಕೃತ್ಯ ನಡೆದ ಒಂದು ಗಂಟೆಯಲ್ಲಿಯೇ ಪ್ರಕರಣ ಭೇದಿಸಿದ್ಧಾರೆ.
ನಲ್ಕುದುರೆ ಗ್ರಾಮದಲ್ಲಿ ಮಹಿಳೆಗೆ ಚಾಕುವನ್ನುತೋರಿಸಿ ಹಲ್ಲೆ ಮಾಡಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಮಾಹಿತಿಯನ್ನಾಧರಿಸಿ ಆರೋಪಿತರನ್ನು ಬೆನ್ನಟ್ಟಿ ಘಟನೆ ನಡೆದ ಒಂದು ಗಂಟೆ ಅವಧಿಯಲ್ಲಿ ಲಿಂಗದಹಳ್ಳಿ ಗ್ರಾಮದಲ್ಲಿ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 80 ಸಾವಿರ ಬೆಲೆ ಬಾಳುವ 15 ಗ್ರಾಂ. ತೂಕದ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ ಕ್ರೂಸರ್ ವಾಹನ, ಮೂರು ಲಾಂಗ್, ಒಂದು ನಕಲಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ಉಪ ವಿಭಾಗದ ಡಿವೈಎಸ್ ಪಿ ಸಂತೋಷ ಮಾರ್ಗದರ್ಶನದಲ್ಲಿ ಚನ್ನಗಿರಿ ಠಾಣೆಯ ಪಿ.ಎಸ್ ಐ ಮಧು, ಸಂತೇಬೆನ್ನೂರು ಪಿ.ಎಸ್.ಐ ಶಿವರುದ್ರಪ್ಪ.ಎಸ್.ಮೇಟಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಓಂಕಾರಪ್ಪ, ಮೈಲಾರಪ್ಪ, ಹಮೀದ್, ಯೋಗೇಶ್, ರುದ್ರಪ್ಪ, ಅಶೋಕ ರೆಡ್ಡಿ, ದೊಡೇಶ್, ಕೊಟ್ರೇಶ್, ಮಂಜುನಾಥ, ಪ್ರಹ್ಲಾದ್, ಸಂತೋಷ, ವೃತ್ತ ಕಛೇರಿಯ ಪರಶುರಾಮ, ಸೋಮಶೇಖರ, ರೇವಣಸಿದ್ದಪ್ಪ, ರಘು ಮತ್ತು ಚನ್ನಗಿರಿ ಪೊಲೀಸ್ ಠಾಣೆಯ ಪರಮೇಶ್ವರ ನಾಯ್ಕ, ಸಂತೋಷ, ನಾಗರಾಜ ರವರನ್ನೊಂಡ ತಂಡ ಪತ್ತೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೇಲ್ಕಂಡ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ ಪಿ ಸಿ.ಬಿ. ರಿಷ್ಯಂತ್ ಶ್ಲಾಘಿಸಿದ್ದಾರೆ.



