ದಾವಣಗೆರೆ: ಪ್ರಸ್ತುತ ವರ್ಷ ಅತೀಯಾದ ಮಳೆಯಿಂದಾಗಿ ಹರಿಹರ ತಾಲ್ಲೂಕಿನ ಬಹಳಷ್ಟು ವೀಳ್ಯದೆಲೆ ತಾಕುಗಳಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಕೆಲವು ಗ್ರಾಮಗಳ ವೀಳ್ಯೆದೆಲೆ ತೋಟಗಳಲ್ಲಿ ಸೊರಗು ರೋಗದ ಭಾದೆ ತೀವ್ರವಾಗಿದೆ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ ಅಭಿಪ್ರಾಯ ಪಟ್ಟರು.
ಹರಿಹರ ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ‘ವೀಳ್ಯದೆಲೆಯಲ್ಲಿ ಸಮಗ್ರ ಬೇಸಾಯ ಕ್ರಮಗಳು’ ಎಂಬ ಮುಂಚೂಣಿ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು. ವೀಳ್ಯೆದೆಲೆಯಲ್ಲಿ ಅತೀಯಾದ ರಸಾಯನಿಕಗಳನ್ನು ಬಳಸದೇ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಅರ್ಕಾ ಸೂಕ್ಷ್ಮಣು ಜೀವಿಗಳ ಸಂಮ್ಮಿಶ್ರಣವನ್ನು 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮತ್ತು ಗಿಡದ ಬುಡಗಳಿಗೆ ಉಪಚಾರ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಲಭ್ಯರೂಪದಲ್ಲಿ ಬೆಳೆಗೆ ಸಿಗುವುದರಿಂದ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹದು. ಜೊತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುವುದು ಎಂದು ತಿಳಿಸಿದರು.
ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್ ಟಿ.ಜಿ. ಮಾತನಾಡಿ ಬೆಳೆಗಳಲ್ಲಿ ಸಸ್ಯ ಜನ್ಯ ಕೀಟನಾಶಕಗಳ ಬಳಕೆ, ಜೈವಿಕ ಗೊಬ್ಬರಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ನಂತರ ತಾಲ್ಲೂಕಿನ ರಾಮತೀರ್ಥ, ಹೊಳೆ ಸಿರಿಗೆರೆ, ಕಡಾರನಾಯಕನಹಳ್ಳಿ ಗ್ರಾಮದ ವಿವಿಧ ಅಡಿಕೆ, ತೆಂಗು, ಹೂವಿನ ತಾಕುಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ವೈಜ್ಞಾನಿಕ ಮಾಹಿತಿಯನ್ನು ನೀಡಲಾಯಿತು.ಕೇಂದ್ರದ ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್, ರೈತರಾದ ಕುಬೇರಗೌಡ, ರುದ್ರೇಶ್, ಮಂಜಣ್ಣ ಇತರರು ಹಾಜರಿದ್ದರು.