ದಾವಣಗೆರೆ: ಕೋವಿಡ್ ಕಾಣದದಿಂದ ಸ್ಥಗಿತಗೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಗ್ರಾಮದಲ್ಲಿ ಇಂದು ಮರು ಚಾಲನೆ ನೀಡಿದರು.
ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಕಂದಾಯ ಸಚಿವ ಆರ್. ಅಶೋಕ್ ಎತ್ತಿನ ಗಾಡಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಶಾಸಕ ರೇಣುಕಾಚಾರ್ಯ, ಸಂಸದ ಜಿ ಎಂ ಸಿದ್ದೇಶ್ವರ್ , ಆಯನೂರು ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ವಾತವರಣ ಬಿಜೆಪಿಗೆ ಪೂರಕವಾಗಿದೆ. ಯಡಿಯೂರಪ್ಪನವರ ಜೊತೆ ನಾನೇ ಖುದ್ದಾಗಿ ಸಂಪರ್ಕ ಮಾಡಿ ಮಾತನಾಡಿದ್ದು, ಯಡಿಯೂರಪ್ಪ ಅವರು ಉಪ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ. ಎರಡು ಕ್ಷೇತ್ರಗಳಲ್ಲೂ ಬಿ. ಎಸ್. ಯಡಿಯೂರಪ್ಪ ಪ್ರಚಾರ ನಡೆಸಲಿದ್ಧಾರೆ ಎಂದರು.
ರಾಜ್ಯದಲ್ಲಿ ಕೋವಿಡ್ ಸರಾಸರಿ ಕಡಿಮೆ ಆಗಿದೆ. ರಾಜ್ಯದಲ್ಲಿ ಶೇಕಡಾ 1ರಷ್ಟು ಕಡಿಮೆಯಾಗಿದೆ. ಹೀಗಾಗಿ ಕೀವಿಡ್ ನಿಯಮ ಇನ್ನಷ್ಟು ಸರಳೀಕರಣ ಬಗ್ಗೆ ಇನ್ನು ತಜ್ಞರ ಜೊತೆ ಮಾತನಾಡಬೇಕಿದೆ. ಎರಡು ದಿನದಲ್ಲಿ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. 1-5 ತರಗತಿ ಪ್ರಾರಂಭ ಬಗ್ಗೆ ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.



