ದಾವಣಗೆರೆ: ಅಮೃತ ಮಹೋತ್ಸವ ಅಂಗವಾಗಿ ವಿಶ್ವ ಹೃದಯ ದಿನ ಆಚರಣೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ದಾವಣಗೆರೆ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು, ಇದರ ಅಂಗವಾಗಿ ಇಂದು ವಿಶ್ವ ಹೃದಯ ದಿನ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಎನ್.ಸಿ.ಡಿ ಕೋಶ, ಜಿಲ್ಲಾ ಯೋಗ ಒಕ್ಕೂಟ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅಮೃತ್ ಮಹೋತ್ಸವದ ಅಂಗವಾಗಿ ಬುಧವಾರ ನಗರದ ಗುರುಭವನ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹೃದಯ ದಿನಾಚರಣೆ ಹಾಗೂ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ತೆರೆದಿರುವ ವಿವಿಧ ಇಲಾಖೆಗಳ ಮಳಿಗೆಗಳಲ್ಲಿ ವಿದ್ಯಾರ್ಥಿನಿಯರು, ಗೃಹಿಣಿಯರು ಸೇರಿದಂತೆ ಎಲ್ಲರಿಗೂ ಉಪಯುಕ್ತವಾಗುವ ಮಾಹಿತಿಗಳು, ಸ್ವಯಂ ರಕ್ಷಣೆ ಕ್ರಮಗಳು ಹಾಗೂ ತಾಯಿ ಮಕ್ಕಳು, ಮಕ್ಕಳಿಗೆ ಎದೆ ಹಾಲಿನ ಮಹತ್ವ ಹಾಗೂ ವಿವಿಧ ರೋಗ ರುಜಿನ ಬಗೆಗೆ ಆರೋಗ್ಯ ಇಲಾಖೆಯಿಂದ ಮಳಿಗೆಗಳಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಬಹಳ ಉಪಯೋಗವಾಗಲಿದೆ ಎಂದರು.

ಈ ಭಾಗದಲ್ಲಿ 10 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಶಿಥಿಲಾವಸ್ಥೆ ಕಟ್ಟಡಗಳು ನೆಲಕ್ಕುರುಳುತ್ತಿದ್ದು, ದಾವಣಗೆರೆಯಲ್ಲೂ ಅಂತಹ ಕಟ್ಟಡಗಳು ಸಾಕಷ್ಟಿವೆ. ಅವುಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುಂದಾಗಬೇಕು ಎಂದು ಶಾಸಕ ರವೀಂದ್ರನಾಥ್ ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಹೃದಯ ಎಂಬುದು ಮಂದಿರವಿದ್ದಂತೆ. ಯಾವ ಹೃದಯ ಪ್ರೀತಿ ಬಯಸಿ, ಪ್ರೀತಿ ಕೊಡುತ್ತದೋ ಆ ಹೃದಯಕ್ಕೆ ಏನೂ ಆಗುವುದಿಲ್ಲ. ಇಂದಿನ ಒತ್ತಡದ ದಿನಗಳಲ್ಲಿ ಪ್ರತಿಯೊಬ್ಬರು ಹೃದಯದ ಕಾಳಜಿ ವಹಿಸುವುದು ಅವಶ್ಯಕವಾಗಿದೆ. ಶಕ್ತಿಯುತ ದೇಹ ಮತ್ತು ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ. ನಮ್ಮ ಆರೋಗ್ಯ ನಮ್ಮ ಕೈಯಲಿದೆ. ಕೆಲಸದ ನಿಮಿತ್ತ ಸಮಯದ ಪರಿವೇ ಇಲ್ಲದೇ ಅತ್ಯಂತ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ಪ್ರಾಣ ತ್ಯಾಗ ಮಾಡಿ, ರಕ್ತ ಹರಿಸಿದ ಅದೆಷ್ಟೋ ಘಟನೆಗಳು ನಡೆದಿದ್ದು, ಇಂದಿನ ಯುವ ಪೀಳಿಗೆಗೆ ಇದನ್ನು ತಿಳಿದುಕೊಳ್ಳಬೇಕೆಂಬ ಆಸಕ್ತಿ ಇಲ್ಲ ಹಾಗೂ ತಂತ್ರಜ್ಞಾನದತ್ತ ಸಾಗುತ್ತಿರುವ ಮಕ್ಕಳಿಗೆ ಸ್ವಾತಂತ್ರ್ಯ ಕುರಿತಾದ ಮಾಹಿತಿಯ ಕೊರತೆ ಇರುವುದರಿಂದ, ಅಮೃತ ಮಹೋತ್ಸವದ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಹೆಚ್ಚು ಪ್ರಚಾರ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, 2015 ರಿಂದ ಇತ್ತೀಚಿನ ದಿನಮಾನಗಳಲ್ಲಿ ಸಾಂಕ್ರಾಮಿಕವಲ್ಲದ (ಅಸಾಂಕ್ರಮಿಕ) ರೋಗಗಳಾದ ಹೃದಯರಕ್ತನಾಳದ ಖಾಯಿಲೆ, ಉಸಿರಾಟದ ತೊಂದರೆ, ಮಧುಮೇಹ, ರಕ್ತದೊತ್ತಡ, ಕಿಡ್ನಿ, ಸ್ಟ್ರೋಕ್ ಖಾಯಿಲೆಗಳು ದೀರ್ಘ ಕಾಲದವರೆಗೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ಬಲಿ ಪಡೆದುಕೊಳ್ಳುತ್ತಿದೆ. ಶೇ.60-65 ರಷ್ಟು ಜನರು ಹೃದಯ ಸಂಬಂಧಿ ಖಾಯಿಲೆಗೆ ಒಳಗಾಗುತ್ತಿದ್ದು, 20 ರಿಂದ 40 ವರ್ಷದೊಳಗಿನವರು ಅತೀ ಹೆಚ್ಚು ಹೃದಯಘಾತಕ್ಕೆ ತುತ್ತಾಗಿ ಸಾವು ನೋವಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಹಾಗೂ ಸಮಯಕ್ಕೆ ಸರಿಯಾಗಿ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎನ್.ಪಿ.ಸಿ.ಡಿ.ಸಿ.ಎಸ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

amruth

ಹೃದಯಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲೆ, ತಾಲ್ಲೂಕು, ಗ್ರಾಮ, ಹೋಬಳಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆರೋಗ್ಯ ಇಲಾಖೆಯಿಂದ ಹಿರಿಯರು, ಮಹಿಳೆಯರು, ಮಕ್ಕಳು ಆರೋಗ್ಯ, ಟೆಲಿ ಮೆಡಿಸಿನ್ ಸೇರಿದಂತೆ ಒಟ್ಟು 12 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 15 ರ ನಂತರ ನಾನ್ ಕಮ್ಯೂನಿಕೆಬಲ್ ಡಿಸೀಸ್ ಸರ್ವೆ ಮೂಲಕ ಆಶಾಕಾರ್ಯಕರ್ತೆಯರ ಸಹಾಯದಿಂದ ಜಿಲ್ಲೆಯಲ್ಲಿರುವ 30 ವರ್ಷದ ಮೇಲ್ಪಟ್ಟವರನ್ನು ಎನ್.ಸಿ.ಡಿ ಆ್ಯಪ್ ಅಲ್ಲಿ ದಾಖಲು ಮಾಡಿಕೊಂಡು ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದ ಅವರು, ಇದರಿಂದ ಹೃದಯ ರೋಗಕ್ಕೆ ತುತ್ತಾದವರು ಬಿಪಿಎಲ್ ಕಾರ್ಡ್ ಅಥವಾ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ತೆಗೆದುಕೊಳ್ಳಬಹುದು. ಅನಾರೋಗ್ಯ ಅಂಶಗಳಾದ ಧೂಮಪಾನ, ಮದ್ಯಪಾನ, ಜಂಕ್ ಫುಡ್ ಸೇವಿಸುವುದರಿಂದ ಅಸಾಂಕ್ರಮಿಕ ರೋಗಗಳಿಗೆ ಬೇಗ ತುತ್ತಾಗುವ ಸಾಧ್ಯತೆಗಳಿರುವುದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ನಡೆಸಲಾಗುತ್ತಿದೆ. ಹಿರಿಯ ನಾಗರಿಕರನ್ನು ಕಡೆಗಣಿಸದೇ ಅವರ ಸುರಕ್ಷತೆಯ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ವಹಿಸಿರುವುದರಿಂದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾಗಿ 10 ಹಾಸಿಗೆಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

good show

ಮಹಾನಗರಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ಯಾವುದೇ ದೇಶ ಶಕ್ತಿಶಾಲಿಯಾಗಿ ಸಮೃದ್ಧಿಯಾಗಬೇಕೆಂದರೆ ಅಲ್ಲಿರುವ ಜನರ ಆರೋಗ್ಯ ಬಹು ಮುಖ್ಯ ಪಾತ್ರವಹಿಸುತ್ತದೆ. ಬಡವರು, ಪೌರ ಕಾರ್ಮಿಕರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗದವರು ಚಿಕ್ಕಪುಟ್ಟ ಖಾಯಿಲೆಗಳನ್ನು ಲೆಕ್ಕಿಸದೇ ನಿರ್ಲಕ್ಷ್ಯ ವಹಿಸುತ್ತಾರೆ. ಖಾಯಿಲೆ ದೊಡ್ಡದಾಗಿ ಸಂಭವಿಸಿದಾಗ ಹೆಣಗಾಡುತ್ತಾರೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಆಯುಷ್ಮಾನ್ ಯೋಜನೆ ಜಾರಿ ತಂದಿದ್ದು, ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೂ ನಮ್ಮ ಆರೋಗ್ಯದ ಕುರಿತು ನಾವೇ ಸಂಕಲ್ಪ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಪುರ, ಡಾ.ಯತೀಶ್ ಕೆ.ಹೆಚ್., ಸ್ಮಾರ್ಟ್ ಸಿಟಿ ಪದಾಧಿಕಾರಿಗಳು, ನಗರ ಮಟ್ಟದ ಸಲಹಾ ವೇದಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ವತಿಯಿಂದ ಶ್ವಾನಪಡೆಯ ಪ್ರದರ್ಶನ ಏರ್ಪಡಿಲಾಯಿತು. ಅಲ್ಲದೆ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ನಿರೋಧಕ ಲಸಿಕಾ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ್ ಅಭಿಯಾನ, ಬೆಸ್ಕಾಂ ವತಿಯಿಂದ ವಿದ್ಯುತ್ ಅವಘಡ ಕುರಿತು ಜನಜಾಗೃತಿ ಕಾರ್ಯಕ್ರಮ ಜರುಗಿತು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *