ಚನ್ನಗಿರಿ: ಅಗತ್ಯ ವಸ್ತುಗಳ ಬೆಲೆ ಮಾತ್ರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ, ಆದರೆ ರೈತರ ಬೆಳೆಗಳಿಗೆ ಮಾತ್ರ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದರು.
ದೇಶಕ್ಕೆ ಅನ್ನ ನೀಡುವ ರೈತನ ಸ್ಥಿತಿ ಚಿಂತಾಜನಕವಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕೆ ಇಳಿದಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು. ಕಳೆದ ವಾರದಿಂದ ಈರುಳ್ಳಿ ಬೆಳೆ ಇಳಿಯುತ್ತಲೇ ಇದೆ, ಕೆಜಿ ಈರುಳ್ಳಿಗೆ 30 ರಿಂದ 40 ರೂಪಾಯಿವರೆಗೆ ಇದ್ದು ಇದೀಗ 5 ರಿಂದ 10 ರೂಪಾಯಿಗೆ ಇಳಿದಿದೆ. ರೈತರು ಮಾರಾಟಕ್ಕೆ ಮಾರುಕಟ್ಟೆಗೆ ಈರುಳ್ಳಿ ತಂದರೆ ಖರೀದಿ ಮಾಡುವವರೇ ಇಲ್ಲದಂತಾಗಿದೆ ಎಂದರು.
ಸಾಲ ಮಾಡಿ ಈರುಳ್ಳಿ ಬೆಳೆದ ರೈತ ಇಂದು ಕಣ್ಣೀರಿಡುವಂತಾಗಿದೆ ಎಂದರು. ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಸಿಗುತ್ತಿಲ್ಲ ಎಂದರು. ದಾವಣಗೆರೆ ಮಾರುಕಟ್ಟೆಗೆ ಅಕ್ಕಪಕ್ಕದ ಜಿಲ್ಲೆ ರೈತರು ಈರುಳ್ಳಿ ಮಾರಾಟಕ್ಕೆ ತಂದರೆ, ವಾಹನ ಬಾಡಿಗೆ ಸೇರಿದಂತೆ ಕೂಲಿಗೆ ಖರ್ಚು ಮಾಡಿದ ಹಣ ಕೂಡ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಈರುಳ್ಳಿ ಬೆಳೆಗಾರರ ಬಗ್ಗೆ ಗಮನ ಹರಿಸಿ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೃಷಿ ಸಚಿವರು ಕೇವಲ ಮಾದ್ಯಮದ ಮುಂದೆ ಹೇಳಿಕೆ ನೀಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ ರೈತರ ನಿಜವಾದ ಕಷ್ಟ ಏನೆಂಬುದನ್ನ ತಿಳಿಯಬೇಕು. ಕೂಡಲೇ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಸೂಕ್ತ ಬೆಂಬಲ ಬೆಲೆ ನೀಡಿ ಈರುಳ್ಳಿ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದರು. ಸರ್ಕಾರ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸದಿದ್ದರೆ ಕಿಸಾನ್ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.



