ಬೆಂಗಳೂರು: ರಾಜ್ಯದಲ್ಲಿ ಶ್ರೀಘ್ರವೇ 600 ಪಶು ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು.
ವಿಧಾನ ಪರಿಷತ್‍ನಲ್ಲಿ ಸದಸ್ಯ ಎಸ್.ವಿ.ಸಂಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇವೆ. 600 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ನೇಮಕಾತಿ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ನಡೆದಿದೆ. ಪಶು ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ಪಶುಗಳ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹುದ್ದೆಗಳು ಸುಮಾರು 20 ವರ್ಷಗಳಿಂದ ಖಾಲಿ ಇವೆ. ಬೇರೆ ಬೇರೆ ಇಲಾಖೆಗೆ ಎರವಲು ಮೇಲೆ ಹೋಗಿರುವವರನ್ನು ವಾಪಸ್ ಕರೆಸಲಾಗುತ್ತಿದೆ. ಈಗಾಗಲೇ ಒಂದಷ್ಟು ಮಂದಿ ವಾಪಸ್ ಬಂದಿದ್ದಾರೆ. ಎರವಲು ಸೇವೆಯಲ್ಲಿ ಅನ್ಯ ಇಲಾಖೆಯಲ್ಲಿರುವ ಎಲ್ಲರನ್ನು ವಾಪಸ್ ಕರೆಸುತ್ತೇವೆ. ತುರ್ತು ಸಂದರ್ಭಕ್ಕಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದರು.
ಎಸ್.ರವಿ, ವಿಜಯ್‍ಸಿಂಗ್ ಸೇರಿದಂತೆ ಅನೇಕರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ಪಶು ಸಂಗೋಪನೆ ಇಲಾಖೆಯಿಂದ ಜಿಲ್ಲೆಗೊಂದರಂತೆ ಗೋಶಾಲೆ ನಿರ್ಮಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.