ಡಿವಿಜಿ ಸುದ್ದಿ, ದಾವಣಗೆರೆ: ಬಿಜೆಪಿಗೆ ಸಂಪೂರ್ಣ ಬಹುಮತವಿದ್ದು, ಎಲ್ಲಾ ಶಾಸಕರ ಬೆಂಬಲವಿದೆ. ನಮಗೆ ಬಾಹ್ಯ ಬೆಂಬಲದ ಅಗತ್ಯವಿಲ್ಲ. ಒಂದು ವೇಳೆ ಜೆಡಿಎಸ್ ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಮುಂದೆ ಬಂದರೆ, ನಾವು ಬೇಡ ಎನ್ನುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿಯ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಪಕ್ಷಕ್ಕೆ ಬಾಹ್ಯ ಬೆಂಬಲದ ಆವಶ್ಯಕತೆ ಇಲ್ಲ. ಕೇಂದ್ರದಲ್ಲಿ ಬಹುಮತ ವಿದ್ದರೂ ಅನೇಕ ಪಕ್ಷಗಳು ಬೆಂಬಲ ನೀಡಿದ್ದರು. ಅದೇ ರೀತಿ ಇಲ್ಲಿ ಬೆಂಬಲ ನೀಡಿದರೆ ಬೇಡಾ ಎನ್ನುವುದಿಲ್ಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ, ದೇವೇಗೌಡರು ಈಗಾಗಲೇ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮಿತ್ರತ್ವ ಉಳಿಯಲಿಲ್ಲ. ಅದರ ಫಲವನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೂ ಬಿಜೆಪಿಯೇ ಆಡಳಿತ ನಡೆಸಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿಗೆ ಜೆಡಿಎಸ್ ಸೇರಿದಂತೆ ಹಲವು ಪಕ್ಷ ನಾಯಕರು ಸೇರಲು ಭಯಸಿದ್ದಾರೆ. ಒಂದು ರೀತಿ ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ.ಕಾಂಗ್ರೆಸ್ ಚುನಾವಣೆ ಈಗ ಬರಬಹುದು, ನಾಳೆ ಬರಬಹುದು ಅಂತಾ ಕಾಯುತ್ತಾ ಕುಳಿತಿದ್ದಾರೆ. ಒಂದು ವೇಳೆ ಚುನಾವಣೆ ಬಂದರೂ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂದರು.



