ಡಿವಿಜಿ ಸುದ್ದಿ, ಹರಪನಹಳ್ಳಿ: ಬೇರೆಯವರ ಬದುಕಿಗೆ ಸ್ಪೂರ್ತಿ ತುಂಬುತ್ತಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಬದುಕು ನಿಗೂಢವಾಗಿರಲಿಲ್ಲ, ಬದಲಿಗೆ ತೆರದ ಪುಸ್ತಕ ಎಂದು ಪ್ರಗತಿಪರ ಚಿಂತಕ ಬಿ.ಚಂದ್ರೇಗೌಡ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಾಜಿ ಶಾಸಕ ಎಂ.ಪಿ.ರವೀಂದ್ರರವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕ ಸ್ಥಾನವನ್ನು ಎಂ.ಪಿ.ರವೀಂದ್ರ ದೊಡ್ಡ ಹುದ್ದೆ ಎಂದು ಭಾವಿಸಿರಲಿಲ್ಲ, ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸುವ ಕೆಲಸ ಎಂದುಕೊಂಡಿದ್ದರು. ತಾಲೂಕಿನಲ್ಲಿ ಹಿಂದೆ ಯಾವುದೇ ಶಾಸಕ ಮಾಡದಿರುವಂತಹ ಕೆಲಸವನ್ನು ಅವರು ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದಾಗ ತನ್ನ ಆರೋಗ್ಯದ ಬಗ್ಗೆ ಯೋಚಿಸಿದೆ ಆಸ್ಪತ್ರೆಗೆ ಆಗಮಿಸಿದ್ದ ಅಂದಿನ ಸಿಎಂ ಸಿದ್ದರಾಮಯ್ಯಗೆ 371 ಜೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ರವೀಂದ್ರ ತಂದೆಗೆ ತಕ್ಕ ಮಗನಾಗಿದ್ದರು. ಆದರೆ ಎಂ.ಪಿ.ಪ್ರಕಾಶ್ ಇದ್ದಿದ್ದರೆ ಇಷ್ಟು ಬೇಗ ನಿರ್ಗಮಿಸುತ್ತಿರಲಿಲ್ಲ ಎಂದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ತಾಲೂಕಿಗೆ 371ಜೆ ಕಲಂ ಸೌಲಭ್ಯ ಸಿಗಬೇಕಾದರೆ ಕೇಂದ್ರ ಸರ್ಕಾರದ ಬಹುಮತ ಬೇಕು, ಇದು ಅಸಾಧ್ಯ ಎಂದು ಬಹುತೇಕರು ಹೇಳುತ್ತಿದ್ದರು. ಹಠಕ್ಕೆ ಬಿದ್ದ ರವೀಂದ್ರ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರುವ ಮೂಲಕ ಹೈ.ಕ ಸೌಲಭ್ಯ ಕಲ್ಪಿಸಿದರು. 371ಜೆ ಸೌಲಭ್ಯ ಸಿಗಲು ಸಿದ್ದರಾಮಯ್ಯ ಪ್ರಮುಖ ಕಾರಣವಾಗಿದ್ದಾರೆ. ಆದರೆ ಇದೀಗ ತಾಲೂಕಿಗೆ ಸೌಲಭ್ಯ ಸಿಗಲು ನಾನೇ ಕಾರಣ ಎಂದು ಹೇಳಿಕೆ ಕೊಡುವವರಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.
ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಮೈದೂರು ರಾಮಪ್ಪ ಮಾತನಾಡಿ, ರವೀಂದ್ರ ಮತಕ್ಕಾಗಿ ರಾಜಕಾರಣ ಮಾಡಿಲ್ಲ, ಅದಧಿಕಾರ ಇಲ್ಲದಿದ್ದರೂ ಜನ ಸೇವೆ ಮಾಡಿದ್ದಾರೆ. ಅವರು ಆರೋಗ್ಯ ಕಾಪಾಡಿಕೊಳ್ಳದಿರುವುದು ದುರಂತ ಸಂಗತಿ. ಎಂ.ಪಿ.ಪ್ರಕಾಶ್ ತಾವು ಬದುಕಿರುವವರೆಗೂ ಕುಟುಂಬ ರಾಜಕಾರಣ ಮಾಡಲಿಲ್ಲ, ಅವರ ಅಗಲಿಕೆ ನಂತರ ರವೀಂದ್ರ ರಾಜಕಾರಣದಲ್ಲಿ ಮಿಂಚಿನಂತೆ ಮಿಂಚಿ ಮರೆಯಾದ ನಕ್ಷತ್ರವಾಗಿದ್ದಾರೆ. ಇಂದು ರವೀಂದ್ರ ಹೆಸರು ಅಳಿಸಿ ಹಾಕಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಇಂತವರ ಜೊತೆಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಎಂದರು.
ಟಿಎಪಿಎಸ್‌ಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಮಠ, ಮೇಘರಾಜ್, ಪತ್ರಕರ್ತ ಪ್ರಸಾದ್ ಕವಾಡಿ, ಪ್ರಶಾಂತ್ ಹಿರೇಮಠ, ಕಲ್ಲಹಳ್ಳಿ ಗೋಣ್ಯೆಪ್ಪ ಮಾತನಾಡಿದರು. ಮುಖಂಡರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಕೆ.ಎಂ.ಬಸವರಾಜಯ್ಯ, ಚಿಕ್ಕೇರಿ ಬಸಪ್ಪ, ನೀಲಗುಂದ ವಾಗೀಶ್, ಮುತ್ತಿಗಿ ಜಂಬಣ್ಣ, ಬಿ.ಕೆ.ಪ್ರಕಾಶ್, ಚಂದ್ರೇಗೌಡ, ಪಿ.ಜಯಲಕ್ಷ್ಮಿ, ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಗೊಂಗಡಿ ನಾಗರಾಜ್, ತೆಲಿಗಿ ಉಮಾಕಾಂತ್, ಮಂಜುನಾಥ, ಎಲ್.ಮಂಜ್ಯನಾಯ್ಕ, ಶಮೀವುಲ್ಲಾ, ಜೀಷಾನ್, ಮತ್ತೂರು ಬಸವರಾಜ್, ಇರ್ಫಾನ್ ಮುದಗಲ್ ಇತರರು ಇದ್ದರು.



