ಡಿವಿಜಿ ಸುದ್ದಿ, ದಾವಣಗೆರೆ: ಒಬ್ಬ ಗುಮಾಸ್ತರಾಗಿ ದಾವಣಗೆರೆ ಬಂದು, ವ್ಯಾಪಾರೋದ್ಯಮ ಪ್ರಾರಂಭಿಸಿ ದಾನ, ಧರ್ಮದ ಮೂಲಕವೇ ಇಡೀ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿದ ಮಾಗನೂರು ಬಸಪ್ಪ ಅವರ ಕೊಡುಗೆ ಅಪಾರ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.
ಮಾಗನೂರು ಬಸಪ್ಪ ಪ್ರತಿಷ್ಠಾನ ಶಿವಕುಮಾರಸ್ವಾಮಿ ಮಹಾ ಮಂಟಪದಲ್ಲಿ ಆಯೋಜಿಸಿದ್ದ ಮಾಗನೂರು ಬಸಪ್ಪ ಅವರ 24 ನೇ ಪುಣ್ಯ ಸ್ಮರಣೆ ಹಾಗೂ ಸರ್ವಮಂಗಳಮ್ಮ ಅವರ 11ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವೆಯಿಂದ ಆರೋಢ ದಾಸೋಹಿ , ದಾನ ಚಿಂತಾಮಣಿ ಬಿರುದು ಪಡೆದ ಮಾಗನೂರು ಬಸಪ್ಪ ಅವರು ಹಾವೇರಿ ಜಿಲ್ಲೆಯಿಂದ ಬಂದು ದಾವಣಗೆರೆಯಲ್ಲಿ ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಅವರು ತಮ್ಮ ಜೀನದಲ್ಲಿ ಬಸವಣ್ಣನವರ ತತ್ವವನ್ನು ಅಕ್ಷರಶಃ ಅಳವಡಿಸಿಕೊಂಡಿದ್ದರು.
ಅವರಲ್ಲಿನ ಪ್ರಾಮಾಣಿಕ, ಶ್ರದ್ಧೆ ,ಸಾಮಾಜಿಕ ಕಳಕಳಿ ಮತ್ತು ಕಾಯಕ ನಿಷ್ಠೆಯಿಂದ ತುಂಬಾ ಎತ್ತರಕ್ಕೆ ಬೆಳೆದರು. ಜೀವನದಲ್ಲಿ ಕಷ್ಟಪಟ್ಟು ದುಡಿದು. ದುಡಿಮೆಯಿಂದ ಗಳಿಸಿದ ಹಣ,ಆಸ್ತಿಯನ್ನು ದಾವಣಗೆರೆಯ ಅನೇಕ ಕಡೆ ದಾನ ಮಾಡಿದರು ಎಂದರು.
ನುಡಿ ನಮನ ಸಲ್ಲಿಸಿದ ಶಿಕ್ಷಣ ತಜ್ಞ ವಾಮದೇವಪ್ಪ, ಸಾಹಿತ್ಯ , ಹರಿಶ್ಚಂದ್ರ ಕಾವ್ಯ, ವಚಗಳ ಬಗ್ಗೆ ಓದಿಕೊಂಡಿದ್ದ ಬಸಪ್ಪ ಅವರು, ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ದಾವಣಗೆರೆಯಲ್ಲಿ ಸಹಕಾರಿ ಬ್ಯಾಂಕ್ , ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸ್ಥಾಪನೆ ಮಾಡಿ, ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ಇದಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಮನೆಯಲ್ಲಿ ನೆಲೆ ಕಲ್ಪಿಸಿದ್ದರು ಎಂದು.
ದಿವ್ಯ ಸಾನಿಧ್ಯ ವಹಿಸಿದ್ದ ವೀರಶೈವ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮಾತನಾಡಿ, ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಮಾಗನೂರು ಬಸಪ್ಪ ದೈಹಿಕವಾಗಿ ಇಲ್ಲ. ಆದರೆ, ಅವರು ಮಾಡಿದ ಕಾರ್ಯಗಳು ಈಗಲೂ ಜೀವಂತ ಸಾಕ್ಷಿಯಾಗಿವೆ ಎಂದರು.
ಮಕ್ಕಳ ತಜ್ಞ ಡಾ. ಸಿ.ಆರ್. ಬಾಣಪುರಮಠ, ಲೆಕ್ಕ ಪರಿಶೋಧಕ ಎಚ್.ಆರ್. ಸುರೇಶ್, ಹಿರಿಯ ವಕೀಲ ಎನ್.ರಾಮದಾಸ್, ಪ್ರಗತಿಪರ ರೈತ ಎಸ್. ರಾಕೇಶ್,ಸಂಗೀತಗಾರ್ತಿ ಎಸ್. ವಿನಯಾ ಅವರಿಗೆ ಸನ್ಮಾನ ನಡೆಯಲಿದೆ. ಈ ಸಂದರ್ಭದಲ್ಲಿ ದಾವಣಗೆರೆ ರಾಮಕೃಷ್ಣ ಮಿಷನ್ ನ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ಉಪಸ್ಥಿತರಿದ್ದರು.



