ಬೆಂಗಳೂರು: ದೇಶದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದೆ. ಅಗತ್ಯ ಲಸಿಕೆ ಲಭ್ಯ ಇಲ್ಲದಿದ್ದರೂ, ಸರ್ಕಾರ ಅಭಿಯಾನ ಆರಂಭಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಕೂಡ ಲಸಿಕೆ ಅಭಿಯಾನ ಸಾಂಕೇತಿಕವಾಗಿ ಚಾಲನೆ ನೀಡಿದೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕೆಂದರೆ ಆರುವರೆ ಕೋಟಿ ಲಸಿಕೆ ಬೇಕು. ಇದಕ್ಕೆ ರಾಜ್ಯಕ್ಕೆ ಸುಮಾರು 2000 ಕೋಟಿ ರೂಪಾಯಿ ಅಗತ್ಯವಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಲಸಿಕೆ ಇನ್ನೂ ಲಭ್ಯವಾಗಿಲ್ಲ. ಇದರ ಮಧ್ಯೆ ಲಸಿಕೆ ಅಭಿಯಾನ ಆರಂಭಿಸಿದ್ದಾರೆ.ಈ ಬಗ್ಗೆ ಸರ್ಕಾರ ನಡೆಸಿರುವ ಪೂರ್ವ ತಯಾರಿಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಪಲ್ಸ್ ಪೊಲೀಯೋ ಮಾದರಿಯಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಬೇಕು. ಪೂರ್ವ ತಯಾರಿ ಇಲ್ಲದೇ ಅಭಿಯಾನ ಆರಂಭಿಸಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ನನಗಿರುವ ಮಾಹಿತಿ ಪ್ರಕಾರ ಈ ತಿಂಗಳಾಂತ್ಯಕ್ಕೆ ದೇಶದಲ್ಲಿ ಲಸಿಕೆ ಲಭ್ಯವಾಗುತ್ತದೆ. ಆದರೆ, ಪ್ರಧಾನಿ ಮೋದಿ ಅವರು ಯಾವಾಗ ಲಸಿಕೆ ಲಭ್ಯವಾಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯನ್ನೂ ಪಡೆಯದೇ ಮೇ1 ರಿಂದ 18 ವರ್ಷದ ಮೇಲ್ಪಟ್ಟ ನೀಡುವುದಾಗಿ ಘೋಷಿಸಿದ್ದಾರೆ ಎಂದರು.
ಲಸಿಕೆ ಲಭ್ಯವಿಲ್ಲದಿದ್ದರೂ ಸಂಸದ ಉಮೇಶ್ ಜಾದವ್ ಅವರಿಗೆ ಮೂಟೆಗಟ್ಟಲೇ ಸರ್ಕಾರ ಲಸಿಕೆ ನೀಡಿದೆ. ಸಾಮಾನ್ಯ ಜನರು ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಆಸರೆ, ಸಂಸದರಿಗೆ ಹೇಗೆ ಲಸಿಕೆ ಸಿಕ್ತ. ಇದಕ್ಕೆ ಸಿಎಂ ಯಡಿಯೂರಪ್ಪ ಉತ್ತರಿಸಬೇಕು ಎಂದು ಒತ್ತಾಯಿಸಿದರು.