ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ 14 ದಿನದ ಜನತಾ ಕರ್ಫ್ಯೂ ಹೇರಲಾಗಿದೆ. ಕರ್ಫ್ಯೂ ನಿರ್ವಹಣೆಗೆ ದಾವಣಗೆರೆ ಮಹಾನಗರ ಪಾಲಿಕೆ ಸನ್ನದ್ಧವಾಗಿದೆ ಎಂದು ಮೇಯರ್ ಎಸ್ .ಟಿ. ವೀರೇಶ್ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಸದಸ್ಯರೊಂದಿಗೆ ಕೊರೊನಾ ಕರ್ಫ್ಯೂ ನಿರ್ವಹಣೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎರಡನೇ ಅಲೆ ದೇಶದಾದ್ಯಂತ ಹರಡಿದೆ. ರಾಜ್ಯ ಸರ್ಕಾರ ಆದೇಶದಂತೆ ಜನತಾ ಕರ್ಫ್ಯೂ ಎಲ್ಲ ಕಡೆ ಜಾರಿಯಲ್ಲಿದೆ. ಕರ್ಫ್ಯೂ ದಾವಣಗೆರೆಯಲ್ಲಿ ಜಾರಿ ಬಗ್ಗೆ ಪಾಲಿಕೆ ಸದಸ್ಯರಿಗೆ ಇಂದು ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಎಲ್ಲ ಸದಸ್ಯರು ಅನೇಕ ಸಲಹೆ ಸೂಚನೆ ನೀಡಿದ್ದಾರೆ. ಆ ಎಲ್ಲ ಸಲಹೆ ಸೂಚನೆಯನ್ನು ಪರಿಗಣನೆಗೆ ತಗೆದುಕೊಂಡಿದ್ದೇವೆ. ಇದರ ಜೊತೆಗೆ ಪಾಲಿಕೆ ಕೈಗೊಳ್ಳಬೇಕಾದ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಕರ್ಫ್ಯೂ ಸಂದರ್ಭದಲ್ಲಿ ಪಾಲಿಕೆ ಸದಸ್ಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮಹಾನಗರ ಪಾಲಿಕೆ ಸದಸ್ಯರು ಜನರ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಹೀಗಾಗಿ ಪಾಲಿಕೆ ಸದಸ್ಯರು ಜನರಿಗೆ ಸಪಂದಿಸುವ ಕೆಲಸ ಮಾಡಲಿದ್ದೇವೆ. ಮಹಾನಗರ ಪಾಲಿಕೆ ಜನತೆ ಜೊತೆ ಯಾವಾಗಲೂ ಇರಲಿದೆ. ಅನವಶ್ಯವಾಗಿ ಯಾರು ಮನೆಯಿಂದ ಹೊರ ಬರಬಾರದು. ಅವಶ್ಯಕತೆ ಇದ್ದಾಗ ಮಾತ್ರ ಮನೆಯ ಹೊರ ಬರಬೇಕು. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಸರ್ಕಾರದ ನಿಯಮ ಪಾಲಿಸದಿದ್ದರೆ. ಕಠಿಣ ಕ್ರಮ ಅನಿವಾರ್ಯ ಎಂದು ತಿಳಿಸಿದರು.
- ಪಾಲಿಕೆ ತೆಗೆದುಕೊಂಡು ನಿರ್ಣಯಗಳು
- ಪಾಲಿಕೆ ವತಿಯಿಂದ ಮನೆಗಳ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡನೆ
- ಮೃತಪಟ್ಟ ವ್ಯಕ್ತಿಗಳಿಗೆ ಮುಕ್ತಿ ವಾಹನವನ್ನು ಪಾಲಿಕೆ ವತಿಯಿಂದ ಉಚಿತವಾಗಿ ನೀಡಲಾಗುವುದು
- ತರಕಾರಿಗಳನ್ನು ಗಾಡಿಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು
- ಕೊರೊನಾ ಲಸಿಕೆ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು
- ದಿನಕ್ಕೆ 13 ಸಾವಿರ ಲಸಿಕೆ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
- ಪಾಲಿಕೆ ಸದಸ್ಯರ ನಿಯೋಗ ರಚಿಸಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು
ಸರ್ಕಾರದ ಮಾರ್ಗಸೂಚಿ ಪಾಲಿಸಲು ದಾವಣಗೆರೆ ಪಾಲಿಕೆ 3 ವಲಯದಲ್ಲಿ ಇಂಜಿನಿಯರ್ ಗಳನ್ನೊಳಗೊಂಡ 3 ತಂಡ ರಚನೆ ಮಾಡಿದ್ದೇವೆ. ಈ ತಂಡ ಸರ್ಕಾರದ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಸೂಲಿ ಮಾಡಲಿದ್ದಾರೆ. ಇನ್ನೂ ಪಾಲಿಕೆ ವತಿಯಿಂದ ಜನತೆ ಅಗತ್ಯವಾದ ಎಲ್ಲ ಸಹಾಯ ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿದರು.



