ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಳೆಯಿಂದ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಮೂರು ಕಚೇರಿಗಳಲ್ಲಿ ಟಿಕೆಟ್ ಗಾಗಿ ನೂಕುನುಗ್ಗಲು ಉಂಟಾಗಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ನಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ಶುರುವಾಗಿದ್ದು, ತಮ್ಮ ತಮ್ಮ ಕ್ಷೇತ್ರದ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕಚೇರಿಯಲ್ಲಿ ಬಲ ಪ್ರದರ್ಶನ ಮಾಡುತ್ತಿದ್ದಾರೆ. ಒಟ್ಟು 45 ವಾರ್ಡ್ ಗಳಲ್ಲಿ ಮೂರು ಪಕ್ಷದಿಂದ 5 -6 ಜನ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು, ಪಕ್ಷದ ಮುಖಂಡರಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಗೊಂದಲದಲ್ಲಿದ್ದಾರೆ.
ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ
ಮೂರು ಪಕ್ಷದವರು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟದಲ್ಲಿದ್ದಾರೆ. ಈ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಒಂದೆಡೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ಪಣ ತೊಟ್ಟಿದೆ. ಒರ್ವ ಸಂಸದ , ಆರು ಜನ ಬಿಜೆಪಿ ಶಾಸಕರನ್ನು ಹೊಂದಿರುವ ಜಿಲ್ಲೆಯಲ್ಲಿ ಬಿಜೆಪಿಗೆ ಪ್ರತಿಷ್ಠೆ ಉಳಿಸಿಕೊಳ್ಳುವ ತವಕ.

ಅಧಿಕಾರ ಉಳಿಸಿಕೊಳ್ಳುವ ಹಠ
ಕಳೆದ ಸಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದುದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಈ ಬಾರಿ ಏನಾದ್ರೂ ಮಾಡಿ ಮತ್ತೇ ಅಧಿಕಾರದ ಗದ್ದುಗೇರಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಆ ಕಾರಣಕ್ಕಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವದೆ ಅಳೆದು ತೂಗಿ ಟಿಕೇಟ್ ನೀಡುವತ್ತ ಪಕ್ಷದ ವರಿಷ್ಠರು ಗಮನಹರಿಸಿದ್ದಾರೆ. ಇನ್ನು ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳನ್ನು ಗೆಲ್ಲುವ ಅವಕಾಶ ಕಡಿಮೆ ಇದ್ದು ಕಿಂಗ್ ಮೇಕರ್ ಸ್ಥಾನಕ್ಕಾಗಿ ಪೈಪೋಟಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಈ ಬಾರಿ ಪಕ್ಷದ ಟಿಕೇಟ್ ಗಾಗಿ ಕೊನೆಯವರೆಗು ಟಿಕೆಟ್ ಪಡೆಯಲು ಪ್ರಯತ್ನಿಸಿ ಸಿಗದೇ ಅಸಮಾಧಾನಗೊಂಡವರು ಪಕ್ಷೇತರ ಸದಸ್ಯರಾಗಿ ನಾಮಪತ್ರ ಸಲ್ಲಿಸುವವರ ಸಂಖ್ಯೆ ಜಾಸ್ತಿ ಇದೆ.
ಪಕ್ಷದ ವರಿಷ್ಠರ ಮೇಲೆ ಹೆಚ್ಚಿನ ಒತ್ತಡ
ಮೂರು ಪಕ್ಷಗಳಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದ್ದು ಕಾಂಗ್ರೆಸ್ ನ ವರಿಷ್ಠರಾದ ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ , ಬಿಜೆಪಿ ವರಿಷ್ಠರಾದ ಜಿ ಎಂ ಸಿದ್ದೇಶ್ವರ್, ಎಸ್ ಎ ರವೀಂದ್ರನಾಥ್ ಎರಡು ಪಕ್ಷಗಳ ಅದ್ಯಕ್ಷರ ಮನೆ ಮುಂದೆ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಪಡೆ ಕಟ್ಟಿಕೊಂಡು ಟಿಕೇಟ್ ಪಡೆಯಲು ಹರಸಾಹಸ ನಡೆಸಿದ್ದಾರೆ.
ಟಕೇಟ್ ಪಡೆಯಲು ಆಕಾಂಕ್ಷಿಗಳು ರಾತ್ರಿ ಹಗಲು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಟಿಕೇಟ್ ಗಾಗಿ ಕನವರಿಸುತ್ತಿದ್ದಾರೆ. ಕೆಲವರಿಗೆ ಟಿಕೆಟ್ ಸಿಕ್ಕರೆ ಅರ್ಧ ಗೆದ್ದಂತೆ ಎಂದು ತಿಳಿದುಕೊಂಡು ತಮ್ಮ ಶಕ್ತಿಯನ್ನೆಲ್ಲಾ ಟಿಕೆಟ್ ಪಡೆಯಲು ವ್ಯಯಿಸುತ್ತಿದ್ದಾರೆ.
ಇನ್ನು ಪಕ್ಷದ ವರಿಷ್ಠರು ಬೇಕಾಬಿಟ್ಟಿ ಟಿಕೆಟ್ ನೀಡದೇ ಚುನಾವಣೆ ಗೆಲ್ಲುವ ಸಾಮಾರ್ಥ್ಯವಿದಿಯೇ ಹಣ ಬಲ ಜಾತಿ ಬಲ ಇದಿಯಾ , ಎದುರಾಳಿ ಅಭ್ಯರ್ಥಿ ಯಾರು ಎಂಬ ಲೆಕ್ಕಾಚಾರದಲ್ಲಿ ತೊಡಗಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ತಂತ್ರಕ್ಕೆ ಮೊರೆಹೋಗಿದ್ದಾರೆ.