ದಾವಣಗೆರೆ: ಬೆಣ್ಣೆ ನಗರಿ ಖ್ಯಾತಿಯ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಹೈಟೆಕ್ ಸ್ಪರ್ಶದೊಂದಿಗೆ ನವೀಕೃತಗೊಂಡ ರೈಲು ನಿಲ್ದಾಣ ಮತ್ತು ಡಿಸಿಎಂ ಲೇಔಟ್ ನ ಕೆಳ ಸೇತುವೆಯನ್ನು ಇಂದು ಲೋಕಾರ್ಪಣೆಗೊಳ್ಳಿಸಲಾಯಿತು.
ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಒಳಪಡುವ ದಾವಣಗೆರೆ ರೈಲ್ವೆ ನಿಲ್ದಾಣ 17.50 ಕೋಟಿ ವೆಚ್ಚದಲ್ಲಿ ಆಧುನಿಕ ಸ್ಪರ್ಶದೊಂದಿಗೆ ಪುನರ್ ನಿರ್ಮಾಣಗೊಂಡಿದೆ. ಇಂದು ಬೆಳಗ್ಗೆ ಡಿಸಿಎಂ ಲೇಔಟ್ ನ ರೈಲ್ವೆ ಕೆಳ ಸೇತುವೆಗೆ ಚಾಲನೆ ನೀಡಿದ ನಂತರ, ದಾವಣಗೆರೆ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ನವೀಕೃತ ರೈಲ್ವೆ ನಿಲ್ದಾಣಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ್ ಚಾಲನೆ ನೀಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ತಿಂಗಳಿಗೆ 1.5 ಕೋಟಿ ವರಮಾನವಿರುವ ದಾವಣಗೆರೆ ನಿಲ್ದಾಣವನ್ನು ಅತ್ಯಾಧುನಿಕವಾಗಿ ಪುನರ್ ನಿರ್ಮಿಸಿದ್ದೇವೆ. ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆ ಬಂದ ನಂತರ ಸ್ಮಾರ್ಟ್ ಸಿಟಿಗೆ ಸರಿಯಾಗಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ತುಡಿತ ಇತ್ತು. ಇದನ್ನು ರೈಲ್ವೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿಯಲ್ಲಿ ಮನವಿ ಮಾಡಿದ್ದೆ, ಅವರು ನನ್ನ ಕನಸಿಗೆ ಸಹಕಾರ ನೀಡಿದರು.
ಈ ನಿಲ್ದಾಣ ಅವರೇ ಉದ್ಘಾಟಿಸಬೇಕಿತ್ತು. ಆದರೆ, ಅವರ ಅಕಾಲಿಕ ನಿಧನದಿಂದ ನಾನು ಉದ್ಘಾಟಿಸುತ್ತಿದ್ದೇನೆ ಎಂದು ನೆನೆದರು.
ಈ ನಿಲ್ದಾಣವನ್ನು ಅತೀ ಕಡಿಮೆ ಅವಧಿಯಲ್ಲಿ ನಿರ್ಮಿಸಿದ್ದು ನನಗೆ ತೃಪ್ತಿ ತಂದಿದೆ. ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವ್ಯಾಪ್ತಿಗೆ ಬರುವ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ರೈಲು ನಿಲ್ದಾಣ ಇದೀಗ ಹೈಟೆಕ್ ಸ್ಪರ್ಶದಲ್ಲಿ ನವೀಕರಿಸಲಾಗಿದೆ. ಆಧುನಿಕ ಎಲ್ಲ ಸೌಲಭ್ಯಗಳನನ್ನು ಒಳಗೊಂಡ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಸುಮಾರು 17.5 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿದೆ ಎಂದರು.
ಕರ್ನಾಟಕದ 5 ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯವಿದ್ದು, ಇದರಲ್ಲಿ ದಾವಣಗೆರೆ ಸಹ ಒಂದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿ ನಿಲ್ದಾಣದಲ್ಲಿ ಈ ಸೌಲಭ್ಯವಿದೆ. ರೈಲು ನಿಲ್ದಾಣದ ಕಟ್ಟಡವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಇನ್ನು ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎರಡು ಕಡೆ ಎಸ್ಕಲೇಟರ್, ಟಿಕೆಟ್ ವಿತರಣಾ ಕೊಠಡಿ, ಕೆಫೆಟೇರಿಯಾ, ವಿಐಪಿ ಲಾಂಚ್, ವಿಶ್ರಾಂತಿ ಕೊಠಡಿ, ಇಂಟಿಗ್ರೇಟೆಡ್ ಟಿಕೇಟಿಂಗ್, ಮುಂಗಡ ಕಾಯ್ದಿರಿಸುವ ಟಿಕೆಟ್ ಕೌಂಟರ್ ಸೇರಿ ಸುಮಾರು 17.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ನಿಲ್ದಾಣದ ಮುಂದೆ ‘ಐ ಲವ್ ಡಿವಿಜಿ’ ಎಂದು ಕೆಂಪು ಬಣ್ಣದಲ್ಲಿ ಬರೆದ ಫಲಕವಿದ್ದು, ಇದು ನಿಲ್ದಾಣದ ಸೆಲ್ಫೀ ಸ್ಟಾಟ್ ಆಗಿದೆ. 100 ಅಡಿ ಎತ್ತರದ ರಾಷ್ಟ ಧ್ವಜ ಸ್ತಂಭವನ್ನು ಸಹ ನಿರ್ಮಿಸಿಸಿದ್ದು, ಇದು ನಿಲ್ದಾಣದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. 27 ಜೋಡಿ ಎಕ್ಸ್ ಪ್ರೆಸ್,6 ಜೋಡಿ ಸಾಮಾನ್ಯ ರೈಲುಗಳು ಸಂಚರಿಸುತ್ತಿದ್ದು, ದಿನಕ್ಕೆ 5 ಲಕ್ಷ ವರಮಾನ ಬರುತ್ತಿದೆ ಎಂದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವಿನ ನೇರ ರೈಲ್ವೆ ಮಾರ್ಗ ಯೋಜನೆಗೆ ಈಗಾಗಲೇ 227 ಎಕೆರೆ ಭೂ ಸ್ವಾಧೀನ ಪಡೆಇಸಿಕೊಳ್ಳಲಾಗಿದೆ. ಬಿಡುಗಡೆಯಾದ 92 ಕೋಟಿಯಲ್ಲಿ 40 ಕೋಟಿ ಹಣ ಖರ್ಚಾಗಿದೆ ಎಂದರು.
ಕೊರೊನಾದಿಂದ ರೈಲ್ವೆ ಇಲಾಖೇ ಕುಗ್ಗಿಲ್ಲ. ಆತ್ಮನಿರ್ಭರ ಭಾರತ ಉದ್ದೇಶವನ್ನು ಈಡೇರಿಸಲು ರೈಲ್ವೆ ಇಲಾಖೆ ಬದ್ಧವಾಗಿದೆ. ದೇಶದಲ್ಲಿ ಯುಪಿಯ ಸರ್ಕಾರ ಇದ್ದಾಗ ಕೇವಲ ಪ್ರತಿ ದಿನ 5 ಕಿ.ಮೀ ಮಾರ್ಗ ನಿರ್ಮಿಸಲಾಗುತ್ತಿತ್ತು. ಇದೀಗ 23 ಕಿ.ಮೀಟರ್ ನಿರ್ಮಿಸಲಾಗುತ್ತಿದೆ ಎಂದರು. ಹರಿಹರ ರೈಲ್ವೆ ನಿಲ್ದಾಣವನ್ನು ಕೂಡ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ ಎಂಧು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ , ಬಿಜೆಪಿ ಮುಖಂಡ ನಾಗರಾಜ್ ಲೋಕಿಕೆರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.