ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ಟಿಕೆವಿಕೆ), ಬಾಪೂಜಿ ‘ಬಿ’ ಸ್ಕೂಲ್, ಎಂಬಿಎ ತರಬೇತಿ, ಬಿಐಇಟಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನದ ಅಂಗವಾಗಿ ಟಿಕೆವಿಕೆ ಆವರಣದಲ್ಲಿ ನುಗ್ಗೆ ಸಸಿ ನಾಟಿ ಮಾಡಲಾಯಿತು.
ದಾವಣಗೆರೆ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಗಾಯತ್ರಿ ದೇವರಾಜ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮೆಲ್ಲರ ಹೊಣೆ. ಜಗದ ಎಲ್ಲಾ ಜೀವಿಗಳಿಗೆ ಮೂಲ ಸಂಪನ್ಮೂಲ ಕೇಂದ್ರ ಅರಣ್ಯ. ಇಂದು ಆಧುನಿಕ ಪ್ರಪಂಚದ ಭರಾಟೆಯಲ್ಲಿ ಅರಣ್ಯನಾಶದಿಂದ ಹಸಿರು ಮನೆ ಪರಿಣಾಮ ಹೆಚ್ಚಿನ ಆಂತರಿಕ ಉಷ್ಣಾಂಶ, ದಿಕ್ಕು ತಪ್ಪಿದ ಮಾರುತಗಳನ್ನು ನೋಡುತ್ತಿದ್ದೇವೆ ಎಂದರು.
ಆದುದರಿಂದ ಪ್ರತಿಯೊಬ್ಬರೂ ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸಿ ಬೆಳಸಬೇಕು. ನಾವೆಲ್ಲರೂ ನಮ್ಮ ಹುಟ್ಟು ಹಬ್ಬಕ್ಕೆ ಗಿಡಗಳನ್ನು ನೇಡುವುದರ ಮೂಲಕ ಆಮ್ಲಜನಕದ ಕ್ರೆಡಿಟ್ ಅಂಕಗಳನ್ನು ನಾವೇ ಜಮಾ ಮಾಡಿಕೊಂಡು, ನಾವು ಬಳಸುವ ಆಮ್ಲ್ಲಜನಕದ ಸಾಲವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬೇಕು. ಈ ರೀತಿ, ಭೂಮಿಯನ್ನು ಹಸಿರುಮಯವಾಗಿ ಮತ್ತೆ ಮಾಡಬೇಕಾದ ಅನಿವಾರ್ಯತೆ ಅಗತ್ಯವಾಗಿದೆ ಎಂದು ತಿಳಿಸಿದರು.
ಬಾಪೂಜಿ ‘ಬಿ’ ಸ್ಕೊಲ್‌ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಪ್ರಪಂಚದ ಎಲ್ಲಾ ವ್ಯವಹಾರಗಳು ನಡೆಯಲು ಮೂಲ ಕಚ್ಚಾ ವಸ್ತು ಅರಣ್ಯದಿಂದಲೇ ದೊರೆಯುವುದು. ಹಾಗಾಗಿ ಎಲ್ಲರೂ ಅರಣ್ಯ ಸಂರಕ್ಷಣೆ ಹಾಗೂ ಪರಿಸರ ನಾಶವನ್ನು ತಡೆಯುವ ನಿಟ್ಟಿನಲ್ಲಿ ಹೋರಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ದೇವರಾಜ ಟಿ.ಎನ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಕೇಕ್ ಕತ್ತರಿಸುವ ಬದಲು ಒಂದು ಸಸಿ ನೆಟ್ಟು ಪೋಷಿಸಿ ಬೆಳಸಬೇಕು ಎಂದು ತಿಳಿಸಿದರು. ಹಾಗೆಯೇ ಕೇಂದ್ರದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಿಯಾವಾಕಿ ಮಿನಿ ಅರಣ್ಯದ ಕುರಿತು ಮಾಹಿತಿಯನ್ನು ನೀಡಿದರು.
ಬಾಪೂಜಿ ‘ಬಿ’ ಸ್ಕೊಲ್ ನ ಪ್ರಾಂಶುಪಾಲ ಡಾ. ನವೀನ್ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರದಲ್ಲಿ ನುಗ್ಗೆ ತಳಿಯ ನಾಟಿಯನ್ನು ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಸುಜಿತ್, ಡಾ ಅಶೋಕ, ಡಾ. ಸರೋಜಾ, ಡಾ ದಿವ್ಯ ಹಾಗೂ ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ರಘುರಾಜ ಜೆ., ಮಣ್ಣು ವಿಜ್ಞಾನ ತಜ್ಞ ಸಣ್ಣಗೌಡ್ರ ಹೆಚ್. ಎಂ., 55 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಸಿದ್ದರು.



