ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಂದ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ವಾಟ್ಸಾಪ್ ನಂಬರ್ ರಚಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ 8277234444 ವಾಟ್ಸಾಪ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳು ಅತ್ಯಂತ ಪ್ರಭಾವಿ ಮಾಧ್ಯಮಗಳಾಗಿವೆ. ಹೀಗಾಗಿ ಪಾಲಿಕೆ ಸದಸ್ಯರ ಸಭೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಜನರ ಸಮಸ್ಯೆ ಪರಿಹಾರಕ್ಕೆ ವಾಟ್ಸಾಪ್ ಸಂಖ್ಯೆ ರಚಿಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ ಪಾಲಿಕೆ ವತಿಯಿಂದ 8277234444 ವಾಟ್ಸಾಪ್ ನಂಬರ್ ರಚನೆ ಮಾಡಲಾಗಿದೆ ಎಂದರು.
ಸಾರ್ವಜನಿಕರು ತಮ್ಮ ಏನೇ ಸಮಸ್ಯೆ ಇದ್ದರೂ, ಈ ನಂಬರ್ ಗೆ ಸಮಸ್ಯೆ ಪೋಟೋ, ಮಾಹಿತಿ ನೀಡಿದರೆ ಅಧಿಕಾರಿಗಳು ತಕ್ಷಣ ಸ್ಪಂದನೆ ಮಾಡಲಿದ್ದಾರೆ. ಸಮಸ್ಯೆಗೆ ಪರಿಹಾರ ಆದ ನಂತರ ಅಧಿಕಾರಿಗಳು, ಸಮಸ್ಯೆ ಪರಿಹಾರದ ಫೋಟೋ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.



