ದಾವಣಗೆರೆ: ಒಂದೇ ಕುಟುಂಬದ ಮೂರು ತಲೆಮಾರಿನ ಐವರು ಸದಸ್ಯರು ಸೇರಿ ಒಟ್ಟು ಆರು ಜನ ಆವರಗೆರೆಯ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಾಲಯದಲ್ಲಿ ಇಂದು ಮುಂಜಾನೆ ಜೈನ ಸನ್ಯಾಸ ದೀಕ್ಷೆ ಪಡೆದರು.
ನಗರದ ವರ್ಧಿಚಂದ್ ಜೀ (75), ಪುತ್ರ ಅಶೋಕ್ ಕುಮಾರ್ ಜೈನ್ (47), ಸೊಸೆ ಭಾವನಾ ಅಶೋಕ್ ಜೈನ್ (45) ಮೊಮ್ಮಕ್ಕಳಾದ ಪಕ್ಷಾಲ್ ಜೈನ್ (17) ಮತ್ತು ಜಿನಾಂಕ್ ಕುಮಾರ್ ಜೈನ್ (15) ಜೊತೆಗೆ ಚೆನ್ನೈನ ಲಕ್ಷಕುಮಾರ್ ಜೈನ್ (23) ಅವರೂ ಲೌಕಿಕ ಜೀವನ ತೊರೆದು ಜೈನ ಸನ್ಯಾಸತ್ವ ಸ್ವೀಕರಿಸಿದರು.
ಒಂದೇ ಕುಟುಂಬದ ಮೂರು ತಲೆಮಾರಿನವರು ಇದೇ ಮೊದಲ ಬಾರಿಗೆ ದೇಶದಲ್ಲಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಬೇರೆಯವರಿಗೆ ಯಾವುದೇ ಕಷ್ಟ ಕೊಡದಂತೆ ಆತ್ಮಕಲ್ಯಾಣಕ್ಕಾಗಿ ವರ್ಷದ 8 ತಿಂಗಳು ಬರಿಗಾಲಿನಲ್ಲಿ ಸಂಚರಿಸಿ ಅಹಿಂಸಾ ತತ್ವವನ್ನು ಬೋಧಿಸುವರು. ದೀಕ್ಷೆ ಸ್ವೀಕಾರದ ನಂತರ ಹೆಸರುಗಳೂ ಬದಲಾಗಲಿವೆ.
ಆಚಾರ್ಯ ವಿಜಯ ಉದಯ್ ಪ್ರಭ್ ಸುರೀಶ್ವರಜೀ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ದೀಕ್ಷೆ ನೀಡಿದರು. ದೀಕ್ಷೆ ಸ್ವೀಕರಿಸುವ ಮೊದಲು ಅವರ ಬಳಿಯಲ್ಲಿದ್ದ ಸ್ಥಿರ ಆಸ್ತಿಯನ್ನು ಬೇರೆಯವರ ಹೆಸರಿಗೆ ಬರೆದು ಕೊಡಲಾಯಿತು. ಹಣ, ಚಿನ್ನದ ಆಭರಣಗಳು ಇನ್ನಿತರೆ ವಸ್ತುಗಳನ್ನು ದಾನ ಮಾಡಿದರು. ಸನ್ಯಾಸತ್ವ ಸ್ವೀಕರಿಸಿದ ಬಟ್ಟೆ, ಶಾಲು, ಜೀವಿಗಳನ್ನು ಓಡಿಸಲು ಪೊರಕೆಯಂತಹ ವಸ್ತು ಸೇರಿ 14 ವಸ್ತುಗಳು ಮಾತ್ರ ಇವರ ಬಳಿ ಇರಲಿವೆ ಎಂದು ಸಮಾಜದ ಗೌತಮ್ ಜೈನ್ ತಿಳಿಸಿದರು.