Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ; ಅರ್ಹರಿಗೆ ಸರ್ಕಾರಿ ಸೌಲಭ್ಯ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ-DC

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ; ಅರ್ಹರಿಗೆ ಸರ್ಕಾರಿ ಸೌಲಭ್ಯ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕ್ರಮ-DC

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕು ಗಡಿ ಭಾಗದ ಅಂಚಿನಲ್ಲಿರುವ ಬಸವನಕೋಟೆ ಹಾಗೂ ಅಗಸನಹಳ್ಳಿ ಗ್ರಾಮಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರ ಸ್ವಾಗತಕ್ಕೆ ತಳಿರು ತೋರಣಗಳಿಂದ ನವವಧುವಿನಂತೆ ಸಿಂಗಾರಗೊಂಡಿದ್ದವು. ಉಭಯ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಕಟೌಟ್‍ಗಳು ರಾರಾಜಿಸುತ್ತಿದ್ದವು. ಗ್ರಾಮದ ಸಮಸ್ಯೆಗಳ ಪರಿಹಾರದ ನಿರೀಕ್ಷೆಯ ಕಣ್ಣುಗಳು ಜಿಲ್ಲಾಧಿಕಾರಿಗಳ ಬರುವಿಕೆಯ ಹಾದಿಯನ್ನೇ ಎದುರು ನೋಡುತ್ತಿದ್ದವು. ಕೆಲವು ಜನರ ಕೈಯಲ್ಲಿ ಸರ್ಕಾರಿ ಸವಲತ್ತು ಪಡೆಯಲು ವಯಕ್ತಿಕ ಅರ್ಜಿಗಳಿದ್ದರೆ, ಇನ್ನು ಕೆಲವರ ಕೈಯಲ್ಲಿ ಗ್ರಾಮದ ಜನರ ಹಿತಾಸಕ್ತಿಗಾಗಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಬೇಡಿಕೆಯನ್ನು ಹೊತ್ತ ಅರ್ಜಿಗಳಿದ್ದವು.

ಇದು ‘ಜಿಲ್ಲಾಧಿಕಾರಿಗಳ ನಡಿಗೆ- ಗ್ರಾಮಗಳ ಕಡೆಗೆ’ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಏರ್ಪಡಿಸಲು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕಾಗಿ ನಿಗದಿಪಡಿಸಲಾಗಿದ್ದ ಬಸವನಕೋಟೆ ಹಾಗೂ ಅಗಸನಹಳ್ಳಿ ಗ್ರಾಮಗಳಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ವಾಹನವನ್ನು ಬಿಟ್ಟು, ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಅಧಿಕಾರಿಗಳ ಸಮೇತ ಕೆಎಸ್‍ಆರ್‍ಟಿಸಿ ಬಸ್ ಮೂಲಕವೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಬಸವನಕೋಟೆ ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಭವ್ಯ ಸ್ವಾಗತವನ್ನೇ ಏರ್ಪಡಿಸಿದ್ದರು.

ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ ಪ್ರಸಕ್ತ ವರ್ಷದ ಮೊದಲ ಗ್ರಾಮ ವಾಸ್ತವ್ಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮವನ್ನು ಜಗಳೂರು ತಾಲ್ಲೂಕು ಬಸವನಕೋಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು.

ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಮೊದಲು ಜಗಳೂರಿನ ಬಸವನಕೋಟೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆರಂಭಿಸಿದರು, ನಂತರ ಅಗಸನಹಳ್ಳಿಯಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.
ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಎಂಬ ಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿ ಜಗಳೂರು ತಾಲ್ಲೂಕಿನ ಅಗಸನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದು, ಬಸವನಕೋಟೆ ಗ್ರಾಮದ ಜನರಿಂದ ಅಹವಾಲನ್ನು ಸ್ವೀಕರಿಸಿ ಸಾಧ್ಯವಾದಲ್ಲಿ ಇಲ್ಲಿಯೇ ಪರಿಹಾರ ಸೂಚಿಸುತ್ತೇವೆ ಎಂದು ಭರವಸೆ ಮೂಡಿಸಿದರು.

ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕೆಂದರೂ ಮಧ್ಯವರ್ತಿಗಳು ಹಾಗೂ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಅವರಿಗೆ ಹಣ ನೀಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಅಪವಾದವಿದೆ. ಈ ಕಾರಣದಿಂದ ಏಜೆಂಟರು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸರ್ಕಾರದ ಎಲ್ಲಾ ಸವಲತ್ತುಗಳನ್ನು ಯಾವುದೇ ಖರ್ಚಿಲ್ಲದೇ ನೇರವಾಗಿ ನಿಮ್ಮ ಬಾಗಿಲಿಗೆ ತಲುಪಿಸುವ ಸದ್ದುದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮದ ಕೇರಿ ಕೇರಿಗೂ ಓಡಾಡಿ ಖುದ್ದಾಗಿ ಸಾರ್ವಜನಿಕರಿಂದ ಅಲ್ಲಿಯ ಸಮಸ್ಯೆಗಳು, ವಾಸ್ತವತೆ ಕುರಿತು ತಿಳಿದುಕೊಂಡಿದ್ದೇನೆ. ಗ್ರಾಮಸ್ಥರು ತಮಗೆ ಸಿಗುವ ಸವಲತ್ತುಗಳ ಕುರಿತು ಪ್ರಾಮಾಣಿಕವಾಗಿ ಹೇಳಿದ್ದು, ಸಮಸ್ಯೆಗಳನ್ನು ತಿಳಿಸಿದ್ದಾರೆ. ಈ ಗ್ರಾಮದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸತ್ಯ ದರ್ಶನವಾಗಿದೆ. ಗ್ರಾಮದಲ್ಲಿ ಸಾಕಷ್ಟು ಕೆಲಸ ಮಾಡಲು ಬಾಕಿ ಉಳಿದಿದ್ದು ಅದನ್ನು ಪೂರೈಸಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ಸಂಧ್ಯಾ ಸುರಕ್ಷಾ ಯೋಜನೆಯಡಿ ಬಸವನಕೋಟೆಯಲ್ಲಿ 23 ಅರ್ಜಿ, ಅಗಸನಹಳ್ಳಿ ಗ್ರಾಮದಲ್ಲಿ 8 ಅರ್ಜಿ ಸೇರಿದಂತೆ ಒಟ್ಟು 31 ಅರ್ಜಿ ಬಂದಿದ್ದು ಅದರ ಮಂಜೂರಾತಿ ಆದೇಶಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ವೃದ್ಧಾಪ್ಯ ವೇತನ ಯೋಜನೆಯಡಿ ಬಸವನಕೋಟೆಯಲ್ಲಿ 31, ಅಗಸನಹಳ್ಳಿಯಲ್ಲಿ 07 ಸೇರಿದಂತೆ ಒಟ್ಟು 38 ಅರ್ಜಿಗಳು ಬಂದಿದ್ದು, ಅರ್ಹರೆಲ್ಲರಿಗೂ ಮಂಜೂರಾತಿ ಆದೇಶ ನೀಡಲಾಗುವುದು. ಇನ್ನು ವಿಧವವೇತನ ಯೋಜನೆಯಡಿ ಬಸವನಕೋಟೆಯಲ್ಲಿ 4, ಅಗಸನಹಳ್ಳಿಯಲ್ಲಿ 01, ಒಟ್ಟು 5 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಮಂಜೂರು ಆದೇಶಗಳನ್ನು ನೀಡಲಾಗುವುದು ಹಾಗೂ 03 ಅಂಗವಿಕಲರ ಮಾಸಾಶನ ಮಂಜೂರಾತಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಗ್ರಾಮಸ್ಥರು ಮಗುವೊಂದನ್ನು ತೋರಿಸಿ ಮಗುವಿನ ಖಾಯಿಲೆ ಗುಣಮುಖ ಮಾಡಲು ಖಾಸಗಿ ಆಸ್ಪತ್ರೆಗೆ ಸೇರಿಸಿ ಇಂಜೆಕ್ಷನ್ ಮಾಡಿಸಿದ್ದರ ಪರಿಣಾಮ ಇಂದು ವಾಸಿಮಾಡಲಾಗದ ಸ್ಥಿತಿಗೆ ತಲುಪಿದೆ. ಚಿಕಿತ್ಸೆ ನೀಡಿ ಗುಣಮುಖರಾಗಲು ಸಾಧ್ಯವೇ ಇಲ್ಲದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದು, ಮಗುವಿನ ಸಂಪೂರ್ಣ ಚಿಕಿತ್ಸೆಗಾಗಿ ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಈ ಗ್ರಾಮದಲ್ಲಿ ಬಹಳಷ್ಟು ಜನ ಅಂಗವಿಕಲರ ವೇತನ ತೆಗೆದುಕೊಳ್ಳುತ್ತಿದ್ದಾರೆ. ಅವರ ಪೈಕಿ ಕೆಲವರು ಶೇ.75 ಕ್ಕಿಂತ ಹೆಚ್ಚು ಜನರು ಅಂಗವೈಕಲ್ಯವಿದ್ದರು ಸಹ ಸರಿಯಾದ ಪ್ರಮಾಣಪತ್ರ ಸಿಗದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ರೂ. 1400 ಪಿಂಚಣಿ ಪಡೆಯಲು ಈ ಗ್ರಾಮದಲ್ಲಿ ಸುಮಾರು 6-7 ಜನರು ಅರ್ಹರಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಎಲ್ಲಾ ಸೌಲಭ್ಯಗಳನ್ನು ವಿಳಂಬ ರಹಿತವಾಗಿ ವಿತರಿಸಲಾಗುತ್ತದೆ ಎಂದರು.

ಈ ಊರಿಗೆ ಅನೇಕ ಕೆಲಸ ಮಾಡಲು ಬಾಕಿ ಇದ್ದು ರಸ್ತೆ, ಚರಂಡಿ ಸ್ವಚ್ಚತೆ, ರಾಜಕಾಲುವೆ ನಿರ್ಮಾಣ, ಆಸ್ಪತ್ರೆಯಲ್ಲಿ ವೈದ್ಯರನ್ನು ಒದಗಿಸಲಾಗುವುದು. ಹಾಗೂ ಈ ಗ್ರಾಮದಿಂದ ಹರಪನಹಳ್ಳಿ, ಉಜ್ಜಯಿನಿ, ಕೊಟ್ಟೂರು ಮತ್ತು ದಾವಣಗೆರೆಗೆ ಸರ್ಕಾರಿ ಬಸ್ಸಿನ ಸೌಲಭ್ಯಗಳನ್ನು ನೀಡುವ ವ್ಯವಸ್ಥೆಯನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿದ್ದು, ಇದರಿಂದ ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾದರಿಯಾಗಲಿದೆ ಎಂದು ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಭರವಸೆ ಮೂಡಿಸಿದರು.

ಜಿಲ್ಲಾ ಕೇಂದ್ರದಲ್ಲಿ ಅನೇಕ ವಸತಿ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ದಾವಣಗೆರೆಯತ್ತ ಮುಖ ಮಾಡಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಬೇಕು. ಅಲ್ಲದೇ ಈ ಗ್ರಾಮಗಳಲ್ಲಿ ಖಾಸಗಿ ಬಸ್ಸುಗಳ ಹಾವಳಿ ತುಸು ಹೆಚ್ಚಾಗೆ ಇದ್ದು, ಮುಂದಿನ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಸರ್ಕಾರಿ ಬಸ್ಸುಗಳ ಸವಲತ್ತುಗಳನ್ನು ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಗಳೂರು ಶಾಸಕರು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ ಕಾರ್ಯಕ್ರಮ ಸರ್ಕಾರದ ಅದ್ಭುತ ಕಲ್ಪನೆಯಾಗಿದೆ. ಕೆರೆಗಳನ್ನು ತುಂಬಿಸುವುದು, ನೀರಾವರಿ, ಶುದ್ಧ ಕುಡಿಯುವ ನೀರು ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಜಗಳೂರು ತಾಲ್ಲೂಕು ಹಿಂದುಳಿದ ಹಾಗೂ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ತೊಡೆದುಹಾಕುವ ಕಾರ್ಯ ಶೀಘ್ರ ಮಾಡಲಾಗುವುದು. 57 ಕೆರೆಗೆ ನೀರು ತುಂಬಿಸುವ ಯೋಜನೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ರೂ.1200 ಕೋಟಿಯ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆಯಾಗಿಸಲು ಕ್ರಮ ವಹಿಸಿದ್ದು, ತಾಲ್ಲೂಕನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕಿಗೆ ಸಾಕಷ್ಟು ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ವಾಲ್ಮೀಕಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾದ ನಂತರ ಜಗಳೂರು ವಿಧಾನಸಭೆ ಕ್ಷೇತ್ರಕ್ಕೆ ಸ್ವಯಂ ಉದ್ಯೋಗ ನೇರ ಸಾಲಕ್ಕೆ ರೂ.1.35 ಕೋಟಿ, 176 ಗಂಗಾ ಕಲ್ಯಾಣಕ್ಕೆ ರೂ.6.16 ಕೋಟಿ, ಉದ್ಯಮಶೀಲತೆಗೆ ರೂ.79 ಲಕ್ಷ ಸೇರಿದಂತೆ ನಿಗಮದ ಮೂಲಕ ಒಟ್ಟು ರೂ.8.37 ಕೋಟಿ ಅನುದಾನವನ್ನು ಫಲಾನುಭವಿಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪುವಂತೆ ಮಾಡುತ್ತೇವೆ ಎಂದು ಭರವಸೆ ಮೂಡಿಸಿದರು.

ತಹಶೀಲ್ದಾರ್ ನಾಗವೇಣಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಸ್ಥಳೀಯ ಸಮಸ್ಯೆಗಳನ್ನು ಇಲ್ಲಿಯೇ ಪರಿಹಾರ ಮಾಡುವಲ್ಲಿ ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ ಎಂದರು.
ಪಹಣಿ ತಿದ್ದುಪಡಿಗಾಗಿ 22 ಅರ್ಜಿಗಳು ಬಂದಿವೆ. ಪೌತಿ ಖಾತೆಗೆ 8 ಅರ್ಜಿ ಸ್ವೀಕೃತವಾಗಿದ್ದು, ಪೌತಿ ಖಾತೆಯ ಆಂದೋಲನಕ್ಕೆ ಕ್ರಮವಹಿಸಲಾಗಿದೆ. ಜಮೀನು ಸಕ್ರಮೀಕರಣ ಕೋರಿ ನಮೂನೆ 53 ರಲ್ಲಿ 13 ಅರ್ಜಿಗಳು ಹಾಗೂ ನಮೂನೆ 57ರಲ್ಲಿ 89 ಅರ್ಜಿಗಳು ಬಂದಿದ್ದು, ಈ ಕುರಿತ ಸಮಿತಿ ಸಭೆಗಳಲ್ಲಿ ಎಲ್ಲಾ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಲಾಗುವುದು. ಬಸವನಕಟ್ಟೆ ಗ್ರಾಮಕ್ಕೆ ಈಗಾಗಲೇ ಸರ್ವೇ ನಂ 23ಎ ಅಡಿ 2 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ್ ಮಹಾಂತೇಶ್ ದಾನಮ್ಮನವರ್, ಉಪವಿಭಾಗಧಿಕಾರಿ ಮಮತ ಹೊಸಗೌಡರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕೊಟ್ರೇಶ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್, ಗ್ರಾ.ಪಂ. ಉಪಾಧ್ಯಕ್ಷೆ ಮರಿಯಮ್ಮನವರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಲ್ಲನಾಯಕ್ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top