ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆಯ ಅಕಾಲಿಕ ಮಳೆಗೆ ಜನರುನಲುಗಿ ಹೋಗಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಆಗುವಂತೆ ಮಾಡಿದೆ. ಚಿತ್ರದುರ್ಗದಲ್ಲಿ ಒಂದೇ ದಿನ 96.8 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತಿ ಹೆಚ್ಚು ಮಳೆಯಾಗಿದೆ.
ಗುರುವಾರ ಸಂಜೆ ಶುರುವಾದ ಮಳೆ ಶುಕ್ರವಾರ ಮುಂಜಾನೆ 3 ಗಂಟೆ ನಂತರ ಗುಡುಗು ಸಹಿತ ಮಳೆ ಜೋರಾಗಿ ಸುರಿಯಲು ಪ್ರಾರಂಭ ಮಾಡಿದ್ದು, ಇಂದು ಬೆಳಗ್ಗೆ 9 ಗಂಟೆಯಾದರು ಜಿಟಿಜಿಟಿ ಹನಿಗಳು ಬಿಳುತ್ತಿದ್ದವು.ಬೇಸಿಗೆ ಕಾಲ ಪ್ರಾರಂಭದಲ್ಲೇ ಅಕಾಲಿಕ ಮಳೆಯು ಬಿದ್ದರಿರುವುದು ಜನರನ್ನು ಬೆಚ್ಚು ಬೀಳಿಸಿದೆ. ಒಂದೆಡೆ ಅಡಿಕೆ ಹಾಗೂ ತೆಂಗು ಬೆಳೆಯುವ ರೈತರ ತೋಟಗಳಿಗೆ ಅನುಕೂಲವಾದರೆ ಮೆಕ್ಕೆಜೋಳ, ರಾಗಿ, ತೋಗರಿ, ಕಡಲೆ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಹಾನಿ ಉಂಟುಮಾಡಲಿದ್ದು, ರೈತರಲ್ಲಿ ಆತಂಕವನ್ನು ತಂದಿದೆ.
ಚಿತ್ರದುರ್ಗ ನಗರದ ಬಿಡಿ ರಸ್ತೆ, ಗುಮಾಸ್ತರ ಕಾಲೋನಿ, ಕೆಳಗೋಟೆ, ಹೊಳಲ್ಕೆರೆ ರಸ್ತೆ ಸೇರಿದಂತೆ ಇನ್ನತರೆ ಪ್ರದೇಶಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಇನ್ನೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಮಲ್ಲಾಪುರ ಕೆರೆ ಮೊದಲೇ ತುಂಬಿತ್ತು, ಈ ಅಕಾಲಿಕ ಮಳೆಯಿಂದಾಗಿ ನೀರು ಕೆರೆ ಹೊರಗಡೆ ಹರಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟುಮಾಡಿತ್ತು.
ಜಿಲ್ಲೆಯಲ್ಲಿ ಬಿದ್ದ ಮಳೆಯ ವಿವರದನ್ವಯ ಚಿತ್ರದುರ್ಗದಲ್ಲಿ 96.8 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತಿ ಹೆಚ್ಚು ಮಳೆಯಾಗಿದೆ. ಚಳ್ಳಕೆರೆ 21.1, ಪರಶುರಾಂಪುರ 8.2, ನಾಯಕನಹಟ್ಟಿ 10.2, ಡಿ.ಮರಿಕುಂಟೆ 2.2, ತಳಕು 54.4, ಚಿತ್ರದುರ್ಗ 2 ರಲ್ಲಿ 56.8, ಹಿರೇಗುಂಟನೂರು 2, ಐನಹಳ್ಳಿ 17, ಭರಮಸಾಗರ 3, ಸಿರಿಗೆರೆ 16.6, ತುರುವನೂರು 16.6, ಹಿರಿಯೂರು 34, ಬಬ್ಬೂರು 17, ಈಶ್ವರಗೆರೆ 11.2, ಇಕ್ಕನೂರು 21.4, ಸೂಗೂರು 8, ಹೊಳಲ್ಕೆರೆ 7.2, ರಾಮಗಿರಿ 11.4, ಚಿಕ್ಕಜಾಜೂರು 25.2, ಬಿ.ದುರ್ಗ 4.3, ಹೆಚ್.ಡಿ.ಪುರ 23, ತಾಳ್ಯ 2.4, ಹೊಸದುರ್ಗ 32.4, ಬಾಗೂರು 8.1, ಮತ್ತೋಡು 40, ಶ್ರೀರಾಂಪುರ 8, ಮಾಡದಕೆರೆ 59.2, ಮೊಳಕಾಲ್ಮುರು 4, ಬಿ.ಜಿ.ಕೆರೆ 6.6, ರಾಯಾಪುರ 2.9 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



