ಬೆಂಗಳೂರು: ಎಟಿಎಂಗೆ ಭರ್ತಿ ತಂದಿದ್ದ 64 ಲಕ್ಷ ಹಣ ಕದ್ದು ಪರಾರಿಯಾಗಿದ್ದ ಮಂಡ್ಯ ಮೂಲದ ವಾಹನ ಚಾಲಕನನ್ನು ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಮೂಲದ ಯೋಗೇಶ್ ಬಂಧಿತ ಆರೋಪಿಯಾಗಿದ್ದು, ಎಟಿಎಂಗೆ ಹಣ ತುಂಬುವ ವಾಹನ ಚಲಾಯಿಸುತ್ತಿದ್ದ, ಈತ ಫೆ.3 ರಂದು ಉತ್ತರ ವಿಭಾಗದ ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ತುಂಬಿಸಬೇಕಿದ್ದ ಹಣ ಕದ್ದು ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯನಗರ ಠಾಣೆ ಪೊಲೀಸರು ಕಳ್ಳನ ಬೆನ್ನು ಹತ್ತಿದ್ದರು. ಲಕ್ಷಾಂತರ ರೂಪಾಯಿ ಹಣ ಕದ್ದು ತಲೆಮರೆಸಿಕೊಂಡಿದ್ದ ಯೋಗೇಶ್, ಮುಂಬೈ ಸೇರಿದಂತೆ ಹಲವೆಡೆ ಸುತ್ತಾಡಿದ್ದಾನೆ. ಕೊನೆಗೆ ಆಶ್ರಯಕ್ಕಾಗಿ ತನ್ನ ಸ್ನೇಹಿತರನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಆತನ ಕಾಲ್ ಡಿಟೈಲ್ಸ್ ಪಡೆದುಕೊಂಡ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಪತ್ತೆ ಹಚ್ಚಿದ್ದಾರೆ.
ಮಂಡ್ಯ ಮೂಲದ ಯೋಗೇಶ್ ಸೆಕ್ಯೂರ್ ವ್ಯಾಲ್ಯೂ ಎಜೆನ್ಸಿಯಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮದುವೆ ಆಗಿ ಎರಡು ಮಕ್ಕಳಿದ್ದರೂ ಪ್ರೇಯಸಿಗಾಗಿ ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಅತ್ತೆ ಮಗಳ ಜೊತೆ ಎಸ್ಕೇಪ್ ಆಗಿದ್ದ. ಈಗ ಆರೋಪಿ ಸೆರೆ ಸಿಕ್ಕಿದ್ದು, ಬಂಧಿತನ ವಿಚಾರಣೆ ನಡೆಯುತ್ತಿದೆ.



