ಡಿವಿಜಿಸುದ್ದಿ.ಕಾಂ, ದಾವಣಗೆರೆ: ಡಾನ್‌ಬಾಸ್ಕೋ ಬಾಲಕಾರ್ಮಿಕರ ಮಿಷನ್, ದಾವಣಗೆರೆ ಜಿಲ್ಲಾ ಮಕ್ಕಳ ಹಕ್ಕುಗಳ ಕ್ಲಬ್ ಒಕ್ಕೂಟ ಸಹಯೋಗದೊಂದಿಗೆ ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿ ಮೌನ ಕ್ಯಾಂಡಲ್ ಜಾಥಾ ನಡೆಸಿದರು.
ನಗರದ ಡಾನ್ ಬಾಸ್ಕೋ ಸಂಸ್ಥೆಯಿಂದ ಆರಂಭಿಸಿ ಸೀಬಾರ ವೃತ್ತದವರೆಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಮಕ್ಕಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ನ್ಯಾಯವಾದಿ ಎಲ್.ಹೆಚ್. ಅರುಣ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಶಿಬಾರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಹೆಣ್ಣು ಮಕ್ಕಳ ಸಂಖ್ಯೆಯು ಇಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಇದು ದೊಡ್ಡ ಮಟ್ಟದಲ್ಲಿ ಲಿಂಗಾನುಪಾತದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದೆಂದು ಕಳವಳ ವ್ಯಕ್ತಪಡಿಸಿದರು. ಇಂದು ಹೆಣ್ಣು ಮಕ್ಕಳು ಹೆಣ್ಣು ಭ್ರೂಣಹತ್ಯೆ, ಲಿಂಗಬೇಧ, ಲೈಂಗಿಕ ಕಿರುಕುಳ , ಬಾಲ್ಯವಿವಾಹ, ಗೃಹ ಹಿಂಸೆ, ಭೇದ -ಭಾವದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ನಿವಾರಣೆ ಮಾಡಲು ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅಗತ್ಯವಾಗಿದೆ ಹಾಗೂ ನ್ಯಾಯವಾದಿ ಎಲ್.ಹೆಚ್. ಅರುಣ್‌ಕುಮಾರ್ ತಿಳಿಸಿದರು.
ನಗರ ಪೊಲೀಸ್ ವೃತ್ತ ನಿರೀಕ್ಷಕ ಗಜೇಂದ್ರಪ್ಪ ಮಾತನಾಡಿ, ಹೆಣ್ಣು ಮಕ್ಕಳ ದುಃಖ, ತಳಮಳ ಮತ್ತು ಹಿಂಸೆಗಳನ್ನು ಮೌನ ಕ್ಯಾಂಡಲ್ ಜಾಥಾ ಮೂಲಕ ತಿಳಿಸುವ ಪ್ರಯತ್ನವಾಗಿದೆ. ಮನುಷ್ಯನ ಹುಟ್ಟಿಗೆ ಕಾರಣವಾಗಿರುವ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಖಂಡನೀಯವಾಗಿದ್ದು, ನಾಗರೀಕ ಸಮಾಜ ತಲೆತಗ್ಗಿಸುವ ಅಂಶವಾಗಿದೆ ಎಂದರು.
ಸಂಯೋಜಕ ಬಿ. ಮಂಜಪ್ಪ ಮಾತನಾಡಿ, 2030 ರೊಳಗೆ ವಿಶ್ವದ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಸಲುವಾಗಿ 17 ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅದರಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೂ ದ್ವಿತೀಯ ಪಿಯುಸಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪ್ರಮುಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾನ್‌ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಿರಿಲ್‌ಸಗಾಯರಾಜ್, ಗಾಂಧಿನಗರದ ಎಎಸ್‌ಐ ನಾಗರಾಜ್, ಕ್ರೀಮ್ ಯೋಜನೆಯ ಎ.ಟಿ. ವಸಂತಕುಮಾರ್, ಜಿ.ಎಸ್. ಈರಾನಾಯ್ಕ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮಾನಾಯ್ಕ ಭಾಗಿಯಾಗಿದ್ದರು.



