ನವದೆಹಲಿ: ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ಸ್ವಪಕ್ಷದ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.ಈ ಬಾರಿ ಪೆಟ್ರೋಲ್ ಬೆಲೆ ವಿಷಯಕ್ಕಾಗಿ ಕೇಂದ್ರದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ದರ ಏರಿಕೆ ವಿರುದ್ಧ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಕೇಂದ್ರ ಬಜೆಟ್-2021 ಮಂಡನೆಯಾದ ಬಳಿಕ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಈ ಫೋಟೋ ಹಂಚಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿನ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ದಾರೆ.
ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93 ರೂಪಾಯಿಗಳಾಗಿದೆ. ಸೀತೆಯ ನೇಪಾಳದಲ್ಲಿ ಪ್ರತಿ ಲೀಟರ್ ಗೆ 53 ರೂಪಾಯಿಗಳಾಗಿದ್ದರೆ ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 51 ರೂಪಾಯಿಗಳು ಎಂದು ಬರೆದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
— Subramanian Swamy (@Swamy39) February 2, 2021
ದೆಹಲಿ ಹಾಗೂ ಮುಂಬೈ ಗಳಲ್ಲಿ ಪೆಟ್ರೋಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 86.30 ರೂಪಾಯಿ ಹಾಗೂ 92.86 ರೂಪಾಯಿಗಳಷ್ಟಾಗಿದೆ. ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 76.48 ರೂಪಾಯಿಗಳಿದ್ದರೆ ಮುಂಬೈ ನಲ್ಲಿ 83.30 ರೂಪಾಯಿಗಳಷ್ಟಾಗಿದೆ.



