ಡಿವಿಜಿಸುದ್ದಿ.ಕಾಂ, ಹರಿಹರ: ಲಂಬಾಣಿ ಸಮುದಾಯದಿಂದ ಹಸಿರು ಬೆಳೆ ಪೋಷಿಸುವ ಧಾರ್ಮಿಕ ಹಬ್ಬವಾದ ತೀಜ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಗುಡಿಯ ಪೂಜಾರಿ ಮೂರ್ತಿನಾಯ್ಕ್ ಗುಡಿಗೆ ಬಂದವರಿಗೆ 9 ಗೋದಿಕಾಳುಗಳು ನೀಡುತ್ತಾರೆ. ಆ 9 ಗೋದಿಕಾಳುಗಳಿಗೆ ಮತ್ತೊಂದಿಷ್ಟು ಕಾಳುಗಳಿಗೆ ಮಣ್ಣ ಸೇರಿಸಿ ಬಿದಿರಿನ ಪುಟ್ಟಿಯಲ್ಲಿ ತುಂಬಿ ಮೊಳಕೆ (ತೀಜ್ )ಬರುವ ವರೆಗೂ ದೇವಸ್ಥಾನದಲ್ಲಿ ಇಟ್ಟಿರುತ್ತಾರೆ. ಅದಕ್ಕೆ 9 ದಿನ ಬೆಳಿಗ್ಗೆ, ಸಂಜೆ ಮಡಿಯಿಂದ ನೀರು ಹಾಕುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳು ಈ ಪೂಜೆಯಲ್ಲಿ ಭಾಗಿಯಾಗುವುದು ವಿಶೇಷ.
ಹೀಗೆ ತಯಾರಿಸಿದ ತೀಜ್ ಅನ್ನು ವಿಷೇಶವಾಗಿ ಪೂಜೆ ಮಾಡುವುದು ಲಂಬಾಣಿ ಸಮುದಾಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಬನ್ನಿ ಹಬ್ಬದಂತೆ ಈ ಹಬ್ಬದ ಆಚರಣೆಯಲ್ಲಿ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ತಮ್ಮದೇ ಶೈಲಿಯ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಬಂಜಾರ ಜನಾಂಗದವರು ಇಂದಿಗೂ ತಮ್ಮದೇ ಉಡುಗೆ-ತೊಡುಗೆ ಬಿಟ್ಟಿಲ್ಲ. ಅದರಲ್ಲೂ ಹಬ್ಬದ ಸಂಭ್ರಮದಲ್ಲಿ ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸುತ್ತಾರೆ.
ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಗುಡಿಯ ಮುಂದೆ ಕಾಟಿ ಧ್ವಜವನ್ನು ಪ್ರತಿಷ್ಠಾಪಿಸುತ್ತಾರೆ. ಕೆಂಪು, ಹಳದಿ ಬಣ್ಣಗಳುಳ್ಳ ಕಾಟಿ ಧ್ವಜ ನಿರ್ಮಿಸಿ ಅದರ ಮುಂದೆ ಸಾಂಪ್ರದಾಯಕ ಆಚರಣೆಗಳು ನಡೆಯುತ್ತವೆ . ಇಡೀ ರಾತ್ರಿ ಭಜನೆ, ಹಾಡು,ಕುಣಿತದ ಮೂಲಕ ದೇವರ ಪ್ರಾರ್ಥನೆ ಮೂಲಕ ಜಾಗರಣೆ ಮಾಡುತ್ತಾರೆ.
ಬೆಳಿಗ್ಗೆ ತಾಂಡಾದ ಪ್ರಮುಖರು ದೇವಸ್ಥಾನಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸಂಜೆ ದೇವಸ್ಥಾನದಲ್ಲಿ ಹಾಕಿರುವ ತೀಜ್ ಬುಟ್ಟಿಗಳನ್ನು ಸುಂದರವಾಗಿ ಶೃಂಗರಿಸಿಕೊಂಡು ಹೊಸ ಉಡುಗೆ ತೊಡುಗೆಗಳಿಂದ ಅಲಂಕರರಾದ ಕನ್ಯೆಯರು ತಲೆ ಮೇಲೆ ಹೊತ್ತುಕೊಂಡು ತಾಂಡಾದ ಪ್ರಮುಖ ಬೀದಿಗಳಲ್ಲಿ ಸಂಗಡಿಗರೊಂದಿಗೆ ಸಾಗುತ್ತಾ ನಂತರ ದೇವರ ಗುಡಿಯ ಅಂಗಳಕ್ಕೆ ಬಂದು ಹಾಡಿ ಲಂಬಾಣಿ ಹಾಡುಗಳಿಗೆ ಕುಣಿದು ಹೆಜ್ಜೆ ಹಾಕಿದರು. ಊರಿನ ನಾಯಕ್, ಕಾರಬಾರಿ, ಡಾವೋ ಹಿರಿಯರೆಲ್ಲರೂ ಸೇರಿ 9 ಬುಟ್ಟಿಗಳಿಂದ ತೀಜ್ ಸ್ವಲ್ಪ ಸ್ವಲ್ಪ ತೆಗೆದುಕೊಂಡು ದೇವರಿಗೆ ಅರ್ಪಿಸುತ್ತಾರೆ..
ಈ ಸಂಭ್ರಮದಲ್ಲಿ ತಾಂಡಾದ ಮುಂಖರಾದ ಬಾಬು ರಾಠೋಡ್, ರಾಜಾ ನಾಯ್ಕ್,ಸೋಮ್ಲ ನಾಯ್ಕ್, ಮಂಜಾನಾಯ್ಕ್, ಎಸ್.ಶಂಕರ್ ನಾಯ್ಕ್, ಕೀರ್‍ಯಾ ನಾಯ್ಕ್, ಎಸ್.ರಾಜಾ ನಾಯ್ಕ್, ಪೀತ್ಲಾ ನಾಯ್ಕ್, ರಮೇಶ್ ನಾಯ್ಕ್,ಹನುಮಂತ್ ನಾಯ್ಕ್, ಮೀನಾಕ್ಷಿ ಬಾಯಿ, ಹಿರಿಯಮ್ಮ,ಪಾರಿ ಬಾಯಿ, ಶಿಲ್ಪಾ ಬಾಯಿ,ಸೋನಾ ಬಾಯಿ, ಹುಮಲಿ ಬಾಯಿ ಹಮೀರ ಬಾಯಿ ಸೇರಿದಂತೆ ಮತ್ತಿರರು ಭಾಗಿಯಾಗಿದ್ದರು.