ದಾವಣಗೆರೆ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದಿನಿಂದ ಬಾರಕೋಲು ಚಳವಳಿ ಆರಂಭಗೊಂಡಿದೆ. ಇನ್ನೂ ಮೀಸಲಾತಿ ಘೋಷಣೆ ಮಾಡದ ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಡಿಸಿದ್ದಾರೆ.
ಅರುಣಾ ಟಾಕೀಸ್ ಸರ್ಕಲ್ ನಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಮಫಲಕಕ್ಕೆ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾಲಾರ್ಪಣೆ ನೆರವೇರಿಸಿ ಪಾದಯಾತ್ರೆ ಆರಂಭಿಸಿದರು. ಇಂದಿನಿಂದ ಬಾರುಕೋಲುಗಳನ್ನು ಹಿಡಿದು ಪಾದಯಾತ್ರೆ ಆರಂಭಿಸಲಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜ.14ರಿಂದ ಆರಂಭವಾಗ ಪಾದಯಾತ್ರೆ ಇಲ್ಲಿವರೆಗೆ 380 ಕಿಲೋಮೀಟರ್ ಕ್ರಮಿಸಿದೆ. ಇದುವರೆಗೆ ನಾನು ಒಬ್ಬನೇ ಪಾದಯಾತ್ರೆ ಮಾಡುತ್ತಿದ್ದೆ, ಇನ್ನುಮುಂದೆ ಉಭಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತದೆ ಎಂದರು.
ಸಮುದಾಯದಲ್ಲಿ ಒಗ್ಗಟ್ಟಿಲ್ಲ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿ ಇತ್ತು. ನಾವು ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ರವಾನೆಯಾಗಿದೆ. ಇಲ್ಲಿಯವರೆಗೆ ಶಾಂತಿ, ಸಹನೆ, ಪ್ರೀತಿಯಿಂದ 2ಎ ಮೀಸಲಾತಿ ನೀಡಿ ಎಂದು ಕೇಳಿದ್ದೆ. ಇನ್ನು ಮುಂದೆ ಶಾಂತಿಯಲ್ಲ, ಕ್ರಾಂತಿ ಮೂಲಕ ಕೇಳುತ್ತೇವೆ. ಆಗ್ರಹಪಡಿಸುತ್ತೇವೆ. ಕಲ್ಲಿನಕೋಟೆ ಚಿತ್ರದುರ್ಗಕ್ಕೆ ಪಾದಯಾತ್ರೆ ತಲುಪುವ ಮೊದಲು 2ಎ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ಪ್ರತಿಭಟನೆ ಇನ್ನಷ್ಟು ಉಗ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳೇ ಇನ್ನೂ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಕೂಡಲೇ ಪಂಚಮಸಾಲಿ ಸಮಾಜಕ್ಕೆ ಎರಡು ಎ ಮೀಸಲಾತಿ ನೀಡಿ. ಇನ್ನು ಮುಂದಿನ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಅದರ ಹೊಣೆಯನ್ನು ಮುಖ್ಯಮಂತ್ರಿಯವರೇ ಹೊರಬೇಕಾಗುತ್ತದೆ ಎಂದರು.
ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಯವರ ಮೇಲೆ ಶಾಸಕರು ಒತ್ತಡ ಹಾಕಬೇಕು. ಉಳಿದವರಿಗೆ ನ್ಯಾಯ ಕೊಡುತ್ತೀರಿ, ಪಂಚಮಸಾಲಿಗಳಿಗೆ ನ್ಯಾಯ ಏಕೆ ಒದಗಿಸುತ್ತಿಲ್ಲ ಎಂದು ಕೇಳಬೇಕು. ಮೀಸಲಾತಿ ಕೊಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಯಡಿಯೂರಪ್ಪ ಅವರಿಗೆ ಒತ್ತಡ ಹಾಕಬೇಕು ಎಂದರು.
ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಮೀಸಲಾತಿ ಪಂಚಮಸಾಲಿಗಳಿಗೆ ನೀಡುವ ಭಿಕ್ಷೆಯಲ್ಲ. ಅದು ಹಕ್ಕು. ಲಿಂಗಾಯತದ ಅನೇಕ ಒಳಪಂಗಡಗಳು 2 ಎ ಮೀಸಲಾತಿಯನ್ನು ಈಗಾಗಲೇ ಪಡೆದಿವೆ. ಪಂಚಮಸಾಲಿಗಳಿಗೂ ಸಿಗಬೇಕು ಎಂದರು.



