ಮೊರಾದಾಬಾದ್ : ದಟ್ಟವಾಗಿ ಕವಿದಿದ್ದ ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣದೆ ಟ್ರಕ್ ಹಾಗೂ ಬಸ್ ನಡುವಿನ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್-ಆಗ್ರ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಇಂದು ಬೆಳಗಿನಜಾವ ಹೆದ್ದಾರಿಯಲ್ಲಿ ದಟ್ಟವಾದ ಮಂಜು ಕವಿದಿತ್ತು. ಹೀಗಾಗಿ ರಸ್ತೆಗಳು ಅಸ್ಪಷ್ಟವಾಗಿ ಕಾಣುತ್ತಿದ್ದವು. ಈ ಸಂದರ್ಭದಲ್ಲಿ ಬಸ್ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಮೂರು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಸ್ಥಳದಲ್ಲೇ 10ಮಂದಿ ಸಾವನ್ನಪ್ಪಿದರೆ, 25 ಮಂದಿ ಗಾಯಗೊಂಡಿದ್ದು, ಅವರಲ್ಲಿ ಬಹುತೇಕರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಲಾ ಎರಡು ಲಕ್ಷ ರೂಪಾಯಿ ಗಾಯಾಳುಗಳಿಗೆ ತಲಾ 50ಸಾವಿರ ರೂ. ಪರಿಹಾರ ಮತ್ತು ವೈದ್ಯಕೀಯ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿದ್ದಾರೆ.



