ಮೈಸೂರು: ಕೊರೊನಾ ಸಂಕಷ್ಟದ ಹಿನ್ನೆಲೆ ಸಂಪನ್ಮೂಲ ಕೊರತೆಯಿಂದ ಈ ಬಾರಿ ಬಜೆಟ್ ಗಾತ್ರವನ್ನು ತಗ್ಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪನ್ಮೂಲ ಕೊರತೆ ಕಾರಣ ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ತಗ್ಗಿಸುವುದು ಅನಿವಾರ್ಯವಾಗಿದೆ ಎಂದರು. ಶಿವಮೊಗ್ಗದಲ್ಲಿ ನಡೆದ ಗಣಿ ಸ್ಫೋಟದ ಸ್ಥಳಕ್ಕೆ ಇಂದು ಭೇಟಿ ನೀಡುತ್ತೇನೆ. ಈ ಘಟನೆಯಲ್ಲಿ ಜಖಂ ಆಗಿರುವ ಮನೆಗಳನ್ನು ಪರಿಶೀಲಿಸಿ ಮನೆಗಳ ಮಾಲೀಕರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಹಾಕಿ ಅದನ್ನು ಸಕ್ರಮ ಮಾಡಿಕೊಳ್ಳಿ. ಇಲ್ಲವೆಂದರೆ ಸ್ಥಳ ತನಿಖೆ ಮಾಡಿ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತರಿದ್ದರು.