ಬೆಂಗಳೂರು: ಪ್ರಧಾನಿ ಮೋದಿ ಆಶಯದಂತೆ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಬೇಕು. ಈ ಕುರಿತು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ಒಂದೇ ಮನೆಯಲ್ಲಿ ಶಾಸಕರು, ಸಂಸದರು ಆಗುವುದಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರು ಸಚಿವ ಸ್ಥಾನ ಬಿಟ್ಟುಕೊಡಬೇಕು. ಪಕ್ಷದ ಸಂಘಟನೆಯ ಕಡೆ ಮುಖ ಮಾಡಬೇಕು. ಹಿರಿಯ ಸಚಿವರು ಹಳ್ಳಿ ಕಡೆಗೆ ನಮ್ಮ ನಡಿಗೆ ಅಂತ ಪಕ್ಷ ಸಂಘಟನೆ ಮಾಡಲು ಹೊರಡಲಿ. ಕ್ರಿಯಾಶೀಲರಾಗಿ ಕೆಲಸ ಮಾಡುವ ಯುವಕರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ಆಗ್ರಹಿಸಿದ್ದಾರೆ.
ರೇಣುಕಾಚಾರ್ಯ ಯಾರ ವಿರುದ್ಧ ದೂರು ಕೊಡಕು ದಿಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಸಂಪುಟ ವಿಸ್ತರಣೆ ಮಾಡುವ ಅಧಿಕಾರ ಸಿಎಂಗೆ ಇದೆ. ರೇಣುಕಾಚಾರ್ಯ ದೆಹಲಿಗೆ ಹೋಗಿ ಯಾರ ವಿರುದ್ಧ ದೂರು ಕೊಟ್ಟಿದ್ದಾರೆ ತಿಳಿದಿಲ್ಲ. ನಮ್ಮ ಅಸಮಾಧಾನ ತಣ್ಣಗಾಗಿಲ್ಲ. ಯಾರೂ ನಮ್ಮ ಜೊತೆ ಮಾತನಾಡಿಲ್ಲ. ಅಧ್ಯಕ್ಷರ ಜೊತೆ ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಯತ್ನಾಳ್ ಹೇಳಿದರು.



