ಬೆಂಗಳೂರು: ಸಚಿವ ಸ್ಥಾನ ನನ್ನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತದೆ. ಇಲ್ಲ ಅಂದ್ರೆ ಇಲ್ಲ. ಕೇವಲ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಶಾಸಕ ಮುನಿರತ್ನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜೊತೆಗೆ ಬಂದವರು ಎಲ್ಲಾ ಬ್ಯುಸಿಯಾಗಿದ್ದಾರೆ. ಯಾರಿಗೂ ಮಾತಾಡುವುದಕ್ಕೆ ಸಮಯವಿಲ್ಲ. ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ, ಮಾತು ತಪ್ಪಲಿಲ್ಲ.ಕೆಲವು ಸಂದರ್ಭಗಳಲ್ಲಿ ಹೀಗೆ ಆಗುತ್ತದೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆಯಾಗುತ್ತದೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಟ್ಟದಾಗಿ ಮಾತನಾಡಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಅಲ್ಲಿಂದ ಒಪ್ಪಿಗೆ ಬರುವುದು ವಿಳಂಬವಾಗಿರಬಹುದು ಎಂದು ತಿಳಿಸಿದರು.
ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಸಿಡಿ ಇದ್ದರೆ ತೋರಿಸಲಿ, ಸುಮ್ಮನೆ ಆಧಾರ ರಹಿತವಾಗಿ ಮಾತಾಡಬಾರದು. ಪಕ್ಷಕ್ಕೆ ಮುಜುಗರ ತರುವ ಕೆಲಸ ಯಾರೂ ಮಾಡಬಾರದು ಎಂದರು.
ನಾನು ದೇವರನ್ನು ನಂಬುವ ಮನುಷ್ಯ. ದೇವರು ಇದ್ದಾನೆ ಎನ್ನುವ ಧರ್ಮದಲ್ಲಿ ಹುಟ್ಟಿದ್ದೇನೆ. ಸರ್ಕಾರ ಸುಭದ್ರವಾಗಿದೆ, ಇನ್ನೂ ಎರಡಡು ವರ್ಷ ಇರುತ್ತದೆ. ಯಾವುದೇ ತೊಂದರೆಯಾಗಲ್ಲ. ಸಚಿವ ಸ್ಥಾನ ಇಲ್ಲ ಅಂತ ಚಿಂತೆ ಇಲ್ಲ. ಅರುಣ್ ಸಿಂಗ್ ಬಳಿ ನನಗೆ ಸಚಿವ ಸ್ಥಾನ ಬೇಕು ಎಂದೂ ಕೇಳಿಲ್ಲ. ಬೇರೆಯವರಿಗೂ ನಮಗೂ ಹೋಲಿಕೆ ಮಾಡಿಕೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ಕೆಟ್ಟ ಸಮಯ ಬರುತ್ತದೆ ಎನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.



