ಡಿವಿಜಿಸುದ್ದಿ.ಕಾಂ, ದಾವಣಗೆರೆ: ದೇಶದಲ್ಲಿ ದಿನಕಳೆದಂತೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಜನ ಜೀವನ ಕಷ್ಟಕರವಾಗುತ್ತಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಐ ಹಾಗೂ ಸಿಪಿಐಎಂ ಪಕ್ಷದಿಂದ ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದೇಶದ ಅರ್ಥವ್ಯವಸ್ಥೆಯೂ ಹಿಂಜರಿತ ಅಂಚಿಗೆ ಬಂದಿರುವುದು ಅತ್ಯಂತ ಗಂಭೀರವಾದ ಸಮಸ್ಯೆ. ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜನ ಜೀವನ ತತ್ತರಿಸಿ ಹೋಗಿದೆ.
ಸಾರ್ವಜನಿಕ ರಂಗದ ರೈಲ್ವೆ, ಬಿಎಸ್ಎನ್ಎಲ್, ಕಲ್ಲಿದ್ದಲು, ರಕ್ಷಣಾ ಕೈಗಾರಿಕೆ, ಬ್ಯಾಂಕ್ ಮತ್ತು ವಿಮಾ ರಂಗಗಳಲ್ಲಿ ಖಾಸಗೀಕರಣ ನೀತಿಗಳಿಂದ ಮತ್ತು ಆರ್ಥಿಕ ಹಿಂಜರಿತಗಳಿಂದ ಕಾರ್ಮಿಕರು ಮತ್ತು ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ರಂಗದ ಶೋಷಣಾ ವ್ಯವಸ್ಥೆ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಕೇಂದ್ರ ಸರ್ಕಾರ ಆರ್ಥಿಕ ಸಮಸ್ಯೆ ಬಗೆಹರಿಸಬೇಕೆಂದು ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಸಾಲಮನ್ನಾ ಮಾಡಬೇಕು. ವೃದ್ದರಿಗೆ, ವಿಧವೆಯರಿಗೆ ಮಾಸಿಕ ಪಿಂಚಣಿ ಮೊತ್ತ 3 ಸಾವಿಕ್ಕೆ ಏರಿಸಬೇಕು. ಖಾಸಗೀಕರಣ ನೀತಿ ಕೈಬಿಟ್ಟು ಜನಪರ ಆರ್ಥಿಕ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಚ್.ಕೆ.ರಾಮಚಂದ್ರಪ್ಪ,ಟಿ.ವಿ.ರೇಣುಕಮ್ಮ, ಹೆಚ್.ಜಿ.ಉಮೇಶ್,ಕೆ.ಎಲ್.ಭಟ್, ಆವರಗೆರೆ ವಾಸು, ಆನಂದರಾಜ್, ಆವರಗೆರೆ ಚಂದ್ರು, ಬಸವರಾಜ್, ಸುರೇಶ್ ಸೇರಿದಂತೆ ಅನೇಕರಿದ್ದರು.



