ಬೆಂಗಳೂರು: ಬಹಳ ದಿನದಿಂದ ಕಾದು ಕುಳಿತಿದ್ದ ಸಚಿವ ಸಂಪುಟ ವಿಸ್ತರಣೆಗೆ ಅಂತೂ ಬಿಜೆಪಿ ವರಿಷ್ಠರು ಅಂತಿಮವಾಗಿ ಒಪ್ಪಿಗೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಜ. 13 ರಂದು ನಡೆಯಲಿದೆ.
ವರಿಷ್ಠರ ಸೂಚನೆ ಮೇರೆಗೆ ಪುತ್ರ ವಿಜಯೇಂದ್ರ ಜೊತೆ ಭಾನುವಾರ ಬೆಳಿಗ್ಗೆ ದೆಹಲಿಗೆ ತೆರಳಿದ ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

ನಾಯಕತ್ವ ಬದಲಾವಣೆಯಿಂದ ಆಗಬಹುದಾದ ತೊಂದರೆ ತಿಳಿದ ವರಿಷ್ಠರು, ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಹಸಿರು ನಿಶಾನೆ ನೀಡಿದರು.ಎಲ್ಲ ಹಿರಿಯ ಸಚಿವರನ್ನು ಸಂಪುಟದಲ್ಲಿ ಮುಂದುವರಿಸಲು ಸೂಚನೆ ಸಿಕ್ಕಿದ್ದು, ಒಬ್ಬ ಸಚಿವರನ್ನು ಕೈ ಬಿಡುವ ಬಗ್ಗೆ ಚರ್ಚೆ ನಡೆದಿದೆ.
ಜ. 13 ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. ಸಂಕ್ರಾಂತಿ ಇರುವ ಕಾರಣ 13 ರ ಮಧ್ಯಾಹ್ನವೇ ಪ್ರಮಾಣ ವಚನ ನಡೆಯಲಿದೆ ಎಂದು ಯಡಿಯೂರಪ್ಪ ರಾತ್ರಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವರಿಷ್ಠರ ಜತೆ ಸುದೀರ್ಘ ಮಾತುಕತೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಯಿತು. ಮಾತುಕತೆ ಸಕಾರಾತ್ಮಕವಾಗಿದ್ದು, ಅತ್ಯಂತ ತೃಪ್ತಿದಾಯಕವಾಗಿತ್ತು ಎಂದರು.
ಯಾರಿಗೆ ಸಚಿವ ಸ್ಥಾನ?: ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಉಮೇಶ ಕತ್ತಿ, ಸಿ.ಪಿ.ಯೋಗೀಶ್ವರ್, ರಾಜೂಗೌಡ, ಅರವಿಂದ ಲಿಂಬಾವಳಿ, ಸುನೀಲ್ ಕುಮಾರ್, ಮುರುಗೇಶ್ ನಿರಾಣಿ ಸೇರಿದಂತೆ ಅನೇಕರ ಗೆಸರು ಮುಂಚೂಣಿಯಲ್ಲಿವೆ. ಇನ್ನೂ ಅಬಕಾರಿ ಸಚಿವ ನಾಗೇಶ್ ಕೈ ಬಿಡುವ ಬಗ್ಗೆ ಚರ್ಚೆ ನಡೆದದೆ.



