ದಾವಣಗೆರೆ: ರಾಷ್ಟ್ರಪಿತ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಸಮಿತಿ ರಚಿಸಿ ಅವರ ವಿದ್ವತಿಗೆ ಮನ್ನಣೆ ನೀಡಿ, ಅವರು ರಚಿಸಿದ ಸಂವಿಧಾನ ಜಗತ್ತಿಗೆ ಶ್ರೇಷ್ಠವಾದದ್ದು ಎನ್ನುವುದನ್ನು ಸೂರ್ಯಚಂದ್ರರು ಇರುವವರೆಗೆ ಅಜರಾಮರಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂದು ನಿನ್ನೆ ನಡೆದ ಬಿಜೆಪಿ ಎಸ್ಸಿ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ದೋಷಿಸಿದ ಬಿಜೆಪಿ ನಾಯಕರಿಗೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಓಟಿಗಾಗಿ ದಲಿತರನ್ನು ಜಪಿಸುತ್ತಿರುವುದು ನಾಚಿಕೆಗೇಡು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಜೀಯವರನ್ನು ಕೊಂದದ್ದು ಯಾರು ಎಂದು ಬಿಜೆಪಿ ಉತ್ತರಿಸಲಿ. ಗೊಡ್ಸೆ ಸಂತತಿಯಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲವೆಂದು ತಿಕ್ಷಣವಾಗಿ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ. ನಾಥೂರಾಮ್ ಗೊಡ್ಸೆ ಗಾಂಧಿಜೀಯವರನ್ನು ಕೊಂದಿದ್ದು ಸಂಘ ಪರಿವಾರದ ಪ್ರಚೋದನೆಯಿಂದ ಎನ್ನುವುದು ಲೋಕಕ್ಕೆ ಗೊತ್ತಿರುವ ವಿಚಾರ. ಗೊಡ್ಸೆಗೆ ದೇವಸ್ಥಾನ ಕಟ್ಟಲು ಹೊರಟಿರುವ ಇಂತಹ ದೇಶ ದ್ರೋಹಿಗಳಿಗೆ ಗಾಂಧಿಯ ಹೆಸರೇಳುವ ಯೋಗ್ಯತೆ ಇಲ್ಲವೆಂದು ಅವರು ಕಿಡಿಕಾರಿದ್ದಾರೆ. ಗಾಂಧಿಜೀ ಮತ್ತು ಅಂಬೇಢ್ಕರ್‌ರವರಿಗೆ ಕಾಂಗ್ರೆಸ್ ಎಂದೂ ಅಗೌರವವಾಗಿ ನಡೆದುಕೊಂಡಿಲ್ಲ. ಬಿಜೆಪಿಯವರು ಇತಿಹಾಸ ತಿರುಚುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು
ಅಂಬೇಡ್ಕರ್ ಹಾಗೂ ಗಾಂಧಿಜೀಯವರ ವಿಚಾರಗಳನ್ನು ಕಾರ್ಯಕ್ರಮಗಳ ಮೂಲಕ ಅನುಷ್ಟಾನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯ ಸನಾತಿನಗಳಿಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಹರಿಜನ ಗಿರಿಜನರಿಗೆ ಅಂಬೇಡ್ಕರ್‌ರವರ ಸಂವಿಧಾನದ ಆಶಯದಂತೆ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅವಿರತ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವು ರೂಪಿಸಿ ಜಾರಿಗೊಳಿಸಿದ ೨೦ ಅಂಶಗಳ ಕಾರ್ಯಕ್ರಮ ದೇಶದ ದಲಿತ ವರ್ಗಕ್ಕೆ ಧ್ವನಿ ನೀಡಿದೆ.
ವರ್ಣಾಶ್ರಮ ಧರ್ಮದ ಪಾರುಪತ್ಯದಾರರು ಇಂದಿಗೂ ಆಸ್ಪಶ್ಯೃತೆ ಆಚರಣೆ ಮಾಡುತ್ತಾ ದೇಗುಲಗಳ ಗರ್ಭಗುಡಿಗಳಿಂದ ದಲಿತರನ್ನು ದೂರ ಇಟ್ಟಿದ್ದಾರೆ. ಇಂತಹವರ ಬಾಯಲ್ಲಿ ದಲಿತರ ಉದ್ದಾರದ ಮಾತು ಬರುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಬಿಜೆಪಿಗೆ ಬದ್ಧತೆ ಇದ್ದರೆ ಸಿದ್ದರಾಮಯ್ಯನ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ. 24 ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿ ಕಾಯ್ದೆ ಮೂಲಕ ಜಾರಿಗೊಳಿಸಿದ್ದಾರೆ. ದಲಿತರ ಬಗ್ಗೆ ಬಿಜೆಪಿ ನಾಯಕರಿಗೆ ಬದ್ಧತೆ ಇದ್ದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಿ ಎಂದು ಅವರು ಸವಾಲ್ ಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ಒಂದೊಂದೇ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ದಲಿತರ ಉದ್ಯೋಗಗಳಿಗೆ ಕುತ್ತು ತಂದಿದ್ದಾರೆ. ಇಂತಹವರಿಂದ ದಲಿತರ ಉದ್ದಾರ ಸಾಧ್ಯವಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದಲಿತರ ವಿರೋಧಿ ಸರ್ಕಾರಗಳಾಗಿದ್ದು ಇವರಿಂದ ದಲಿತರ ಉದ್ದಾರ ಸಾಧ್ಯವಿಲ್ಲ. ಬಿಜೆಪಿಯ ಪ್ರಧಾನಮಂತ್ರಿ ಮೋದಿಯಿಂದ ಹಿಡಿದು ಅಮಿತ್‌ಷಾ ಸೇರಿದಂತೆ ಎಲ್ಲಾ ನಾಯಕರು ದಲಿತರ ಓಟು ಪಡೆಯಲು ದಲಿತರ ಮನೆಯಲ್ಲಿ ಹೋಟೇಲ್ ತಿಂಡಿ ತಿನ್ನುವುದು, ದಲಿತರ ಪಾದಪೂಜೆ ಮಾಡುವಂತೆ ನಟಿಸುವುದು. ತಿಳಿಯಲಾರಷ್ಟು ದಲಿತರು ಮುಗ್ದರಲ್ಲರೆಂದು ಅವರು ಲೇವಡಿ ಮಾಡಿದ್ದಾರೆ.