ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದ ಹಿಂದೆ ಆರ್‍ಎಸ್‍ಎಸ್ ಕೈವಾಡವಿದ್ದು, ಸಿದ್ದರಾಮಯ್ಯ ನಾಯಕತ್ವ ಒಡೆಯುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್‍ನ ಕುರುಬ ಸಮುದಾಯದ ಶಾಸಕರು, ಮಾಜಿ ಸಚಿವರು ಹಾಗೂ ನಾಯಕರು ಗಂಭೀರ ಆರೋಪ ಮಾಡಿದರು.
ಖಾಸಗಿ ಹೋಟೆಲ್‍ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಮುದಾಯದ ನಾಯಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಬೀದರ್, ಕಲ್ಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿನ ಗೋಂಡಾ ಮತ್ತು ರಾಜಗೊಂಡಾ ಸಮುದಾಯವನ್ನೇ ಹೋಲುವ ಕುರುಬ ಮತ್ತು ಹಾಲುಮತ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸಚಿವ ಈಶ್ವರಪ್ಪ ಅವರು ಮೊದಲು ಈ ಶಿಫಾರಸು ಅಂಗೀಕಾರ ಪಡೆದುಕೊಂಡು ಬರಲಿ ಎಂದು ಒತ್ತಾಯಿಸಿದರು.
ಶಾಸಕ ಬೈರತಿ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಎಸ್ಟಿ ಮೀಸಲಾತಿಯ ಹೋರಾಟಕ್ಕೆ ವಿರುದ್ಧವಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.ಕುರುಬ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು ಎಸ್ಟಿ ಮೀಸಲಾತಿ ಸಿಗಬೇಕು ಎಂಬ ಹೋರಾಟಕ್ಕೆ ಸಂಪೂರ್ಣ ಬೆಂಬಲರಾಗಿದ್ದಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಈಶ್ವರಪ್ಪ ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಸಹೋದ್ಯೋಗಿಗಳ ಮನವೊಲಿಸಿ ಎಸ್ಟಿ ಮೀಸಲಾತಿಗಾಗಿ ಕೇಂದ್ರಕ್ಕೆ ಮತ್ತೊಮ್ಮೆ ಬೇಕಾದರೆ ಶಿಫಾರಸು ಮಾಡಿಸಲಿ ಅಥವಾ ಕೇಂದ್ರದಲ್ಲಿ ನೆನೆಗುದಿಯಲ್ಲಿರುವ ಶಿಫಾರಸಿಗೆ ಅಂಗೀಕಾರ ದೊರಕಿಸಿಕೊಡಲಿ ಎಂದರು.
ಕುರುಬ ಸಮುದಾಯವು ಎಸ್ಟಿಗೆ ಸೇರ್ಪಡೆಯಾದರೆ ಅಲ್ಲಿ ಸಿಗುವ ಸೌಲಭ್ಯ ಕಡಿಮೆಯಾಗುತ್ತದೆ. ಹಿಂದುಳಿದವರ್ಗ 2ಎ ಕೋಟಾದಲ್ಲಿ ನಮಗೆ ಮೀಸಲಾತಿ ಇದೆ. 2ಎ ಸಮುದಾಯದಲ್ಲಿ ನಾವು ಶೇ.8ರಷ್ಟು ಜನಸಂಖ್ಯೆ ಇದ್ದೇವೆ. ಶೇ.8ರಷ್ಟು ಮೀಸಲಾತಿಯನ್ನು ಎಸ್ಟಿಗೆ ಸೇರಿಸಿ ನಮ್ಮನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಿದರೆ ನ್ಯಾಯ ದೊರೆಯುತ್ತದೆ. ನಮ್ಮಂತೆಯೇ ಹಿಂದುಳಿದಿರುವ ಸವಿತಾ, ತಿಗಳ, ಬೆಸ್ತ, ಗೊಲ್ಲ ಸಮುದಾಯಗಳನ್ನೂ ಕೂಡ ಎಸ್ಟಿಗೆ ಸೇರಿಸುವ ಅಗತ್ಯವಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಈಶ್ವರಪ್ಪ ಅವರು ಸ್ವಾರ್ಥಕ್ಕಾಗಿ ಜನಾಂಗದ ಸಂಘಟನೆ ಮಾಡುತ್ತಾರೆ. ಈ ಮೊದಲು ಕಾಗಿನೆಲೆ ಹೋರಾಟಕ್ಕೆ ಬರದೆ ಹಿಂದೇಟು ಹಾಕಿದ್ದರು. ಉಡುಪಿಯ ಕೃಷ್ಣಮಠದ ಕನಕನ ಕಿಂಡಿ ಹೋರಾಟದ ವೇಳೆ ಆಹ್ವಾನ ನೀಡಿದಾಗ ಈಶ್ವರಪ್ಪ ಅವರು ನಾನು ಕುರುಬ ಅಲ್ಲ. ಹಿಂದು ಎಂದು ಹೇಳಿಕೊಂಡಿದ್ದರು.
ರಾಯಣ್ಣ ಬ್ರಿಗೇಡ್ ಮಾಡಿ ನಾಲ್ಕು ತಿಂಗಳು ಹೋರಾಟ ಮಾಡಿದರು. ಆರ್‍ಎಸ್‍ಎಸ್ ಹೇಳುತ್ತಿದ್ದಂತೆ ಅರ್ಧಕ್ಕೆ ನಿಲ್ಲಿಸಿದರು. ಈಗ ಎಸ್ಟಿ ಮೀಸಲಾತಿ ಹೋರಾಟ ಆರಂಭಿಸಿದ್ದಾರೆ. ಆರ್‍ಎಸ್‍ಎಸ್ ಹೇಳಿದ ತಕ್ಷಣ ಯಾವಾಗ ಬೇಕಾದರೂ ಹೋರಾಟ ನಿಲ್ಲಿಸಿಬಿಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಯತೀಂದ್ರ, ಮಾಜಿ ಸಚಿವರಾದ ಎಚ್.ವೈ.ಮೇಟಿ, ಕೃಷ್ಣಪ್ಪ, ಬಸವರಾಜ ಶಿವಣ್ಣನವರ್, ಶಾಸಕರಾದ ಕುಸುಮಾ ಶಿವಳ್ಳಿ, ಮಾಜಿ ಶಾಸಕ ವಾಸು, ಮುಖಂಡರಾದ ಗೋವಿಂದಪ್ಪ, ಬಾಳಪ್ಪ ಮೇಟಿ, ಸುಜಾತ ಕಳಿಮಠ್, ವನಿತಾರಾವ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತನಗೌಡ ಮತ್ತಿತರರು ಉಪಸ್ಥಿತರಿದ್ದರು.