ಬೆಂಗಳೂರು: ಸಾರಿಗೆ ನೌಕರನ್ನು ಸರ್ಕಾರಿ ನೌಕರೆಂದು ಪರಿಗಣಿಸುವುದಕ್ಕೆ ಸರ್ಕಾರಕ್ಕೆ ಸಮಯವಕಾಶ ಬೇಕಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಎರಡು ಗಂಟೆಗಳ ಕಾಲ ಸಾರಿಗೆ ಇಲಾಖೆ ಯುನಿಯನ್ ಜೊತೆ ಸಭೆ ಬಳಿಕ ಮಾತನಾಡಿದ ಅವರು, ನಿನ್ನೆ ಅಧಿವೇಶನ ಇದ್ದ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರೂ ಅದನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ನನಗೆ ಯಾವುದೇ ರೀತಿಯ ಅಹಂ ಇಲ್ಲ, ಪ್ರತಿಭಟನೆ ನಡೆಸುತ್ತಿರುವ ಸಂಘಟನೆ ಮುಖಂಡರೊಂದಿಗೆ ಚರ್ಚಿಸಲು ಸಿದ್ಧವಿದ್ದೇನೆ ಎಂದರು.
ಸಾರಿಗೆ ನೌಕರಿಗೆ ಕೆಲಸ ಕೊಡಲು ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬೆಳಗ್ಗೆಯಿಂದ ಅಧಿಕಾರಗಳ ಜೊತೆ ಸಭೆ ನಡೆಸಿ ವರದಿ ತರಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಿಢೀರ್ ಆಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರತಿಭಟನೆ ಕೈ ಬಿಟ್ಟು, ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿದರು. ಆದರೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಕಾರರು, ಬೇಡಿಕೆ ಈಡೇರುವ ವರೆಗೂ ಮುಷ್ಕರ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.