ಹೊನ್ನಾಳಿ: ಗೋಹತ್ಯೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕರವಾದ ಹಿನ್ನೆಲೆ ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಗೋವುಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಬಳಿ ಗೋವುಗಳಿಗೆ ಪೂಜೆ ಸಲ್ಲಿಸಿದ ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗೋಹತ್ಯೆ ಕಾಯ್ದೆ ವಿರೋಧಿಸುವವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿರು. ಈ ವೇಳೆ ಮಾತನಾಡಿದ ರೇಣುಕಾಚಾರ್ಯ ಗೋಹತ್ಯೆ ನಿಷೇಧ ವಿಧೇಯಕ ರಾಜ್ಯಪಾಲರ ಸಹಿ ಬಿದ್ದರೇ ಉತ್ತರ ಪ್ರದೇಶ ಹೊರತು ಪಡಿಸಿ ಕರ್ನಾಟಕ ಗೋಹತ್ಯೆ ನಿಷೇಧ ಮಾಡಿದ ಎರಡನೇ ರಾಜ್ಯ ಎನಿಸಿಕೊಳ್ಳಲಿದೆ ಎಂದರು.
ಗೋಹತ್ಯೆ ನಿಷೇಧವನ್ನು ವಿರೋಧಿಸುವವರು ದೇಶ ದ್ರೋಹಿಗಳು. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಐತಿಹಾಸಿಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ತಂದಿದ್ದಾರೆ. ಈ ಮೂಲಕ ಹಿಂದುಗಳ ಭಾವನೆ ಗೌರವಿಸಿದ್ದಾರೆ ಎಂದು ತಿಳಿಸಿದರು.
ಹಿಂದುಗಳ ಬಹುದಿನದ ಬೇಡಿಯಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದರಿಂದ ಹಿಂದುಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಯಾರೇ ಗೋವುಗಳನ್ನು ಹತ್ಯೆ ಮಾಡಿದರೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ರಾಜ್ಯಪಾಲರು ಸಹಿ ಮಾಡದೇ ಕಾಂಗ್ರೆಸ್ ಏಜೆಂಟರ್ ರೀತಿ ವರ್ತಿಸಿದ್ದರು. ಆದರೆ ಈ ಸಲ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಜಾರಿಯಾಗಲಿದೆ ಎಂಬ ವಿಶ್ವಾಸವನ್ನು ರೇಣುಕಾಚಾರ್ಯ ವ್ಯಕ್ತ ಪಡಿಸಿದರು.ಈ ಸಂಧರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಉಮಾ ರಮೇಶ್, ತಾಲೂಕು ಪಂಚಾಯಿತಿ ಸದಸ್ಯರಾದ ಶಿವಾನಂದ್ಅರಕೆರೆ ನಾಗರಾಜ್, ಪಲ್ಲವಿರಾಜು ಸೇರಿದಂತೆ ಮತ್ತೀತರಿದ್ದರು.



