ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದು ನನಗೆ ಆಘಾತ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ ನನಗೆ ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಯೋಗೇಶ್ವರ್ ವಿಚಾರವನ್ನು ನನ್ನ ಬಳಿ ಕೇಳಬೇಡಿ. ಅವರೇನು ಅಮಿತ್‍ಶಾ ನಾ ? ಜೆ.ಪಿ.ನಡ್ಡಾನಾ ? ನರೇಂದ್ರ ಮೋದಿನಾ? ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪನವರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವೇನು ಯಾವುದೇ ರೆಸಾರ್ಟ್‍ಗೆ ಹೋಗಿಲ್ಲ. ಮನೆಯಲ್ಲಿ ಕಾಫಿ, ತಿಂಡಿ ಸೇವಿಸಿ ಶಾಸಕರ ಜತೆ ಚರ್ಚೆ ಮಾಡಿದ್ದರಲ್ಲಿ ತಪ್ಪೇನಿಲ್ಲ. ನಮ್ಮ ಅಭಿಪ್ರಾಯಗಳನ್ನು ಅಧ್ಯಕ್ಷರ ಮುಂದೆ ವ್ಯಕ್ತಪಡಿಸಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಜತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅವರಿಗೆ ಯಾವ ವಿಚಾರವಾಗಿ ಮಾತನಾಡಬೇಕಿತ್ತೋ ಅದನ್ನು ಮಾತನಾಡಿದ್ದೇನೆ ಎಂದರು.
ಗ್ರಾಮ ಪಂಚಾಯ್ತಿ ಚುನಾವಣೆ ಸಂಬಂಧ ಅಧ್ಯಕ್ಷರ ಬಳಿ ಚರ್ಚೆ ಮಾಡಲಾಗಿದೆ. ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯಾಧ್ಯಕ್ಷರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಗ್ರಾಮ ಚುನಾವಣೆಯಲ್ಲಿ ಇದನ್ನು ಅಳವಡಿಸಿಕೊಂಡು ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತೇವೆಂದು ಹೇಳಿದರು.



